ಸಾಲು ಸಾಲು ಹಬ್ಬ: ಕೊರೋನ ಸ್ಪೋಟ ಆತಂಕ: ಮುನ್ನೆಚ್ಚರಿಕೆಗೆ ಆರೋಗ್ಯ ಇಲಾಖೆ ಸೂಚನೆ
ನವದೆಹಲಿ, ಅಕ್ಟೋಬರ್ 7 : ಅಕ್ಟೋಬರ್ನಿಂದ ಡಿಸೆಂಬರ್ವರೆಗೆ ಸಾಲು ಸಾಲು ಹಬ್ಬಗಳಿದ್ದು, ಈ ಸಂದರ್ಭದಲ್ಲಿ ಕೊರೋನಾ ಸೋಂಕು ಸ್ಫೋಟಗೊಳ್ಳುವ ಆತಂಕ ವ್ಯಕ್ತವಾಗಿದ್ದು, ಸೂಕ್ತ ಮುನ್ನೆಚ್ಚರಿಕೆ ವಹಿಸುವಂತೆ ಕೇಂದ್ರ ಆರೋಗ್ಯ ಸಚಿವಾಲಯ ನಿರ್ದೇಶನ ನೀಡಿದೆ.
ಈ ಕುರಿತು ಸ್ಟಾಂಡರ್ಡ್ ಆಪರೇಟಿಂಗ್ ಪ್ರೊಸಿಜರ್ – ಎಸ್.ಓ.ಪಿ ಬಿಡುಗಡೆ ಮಾಡಿದ್ದು, ಎಲ್ಲಾ ಹಬ್ಬಗಳ ಸಂದರ್ಭದಲ್ಲೂ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದೆ.
ಹಬ್ಬದ ಸಂದರ್ಭದಲ್ಲಿ ಎದುರಾಗುವ ಜನಜಂಗುಳಿ ತಪ್ಪಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಕನಿಷ್ಠ ಆರು ಅಡಿ ಅಂತರ ಕಾಯ್ದುಕೊಳ್ಳಬೇಕು. ಎಲ್ಲಾ ಧಾರ್ಮಿಕ ಸ್ಥಳಗಳಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಹೇಳಿದೆ.
ಧಾರ್ಮಿಕ ಸ್ಥಳಗಳು, ವ್ಯಾಪಾರ ಮೇಳಗಳು, ಸಮಾವೇಶಗಳು, ಪ್ರದರ್ಶನ ಮಳಿಗೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸೋಂಕು ಹರಡುವ ಆತಂಕ ವ್ಯಕ್ತವಾಗಿದೆ. ಈ ದಿಸೆಯಲ್ಲಿ ಎಲ್ಲಾ ಧರ್ಮೀಯರು ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸ್ಪಷ್ಟಪಡಿಸಿದೆ.
ವ್ಯಕ್ತಿಗತ ಅಂತರದ ಜತೆ ಸ್ಯಾನಿಟೈಸರ್ ವ್ಯವಸ್ಥೆ ಮಾಡಬೇಕು, ದೇಹದ ಉಷ್ಣಾಂಶ ತಪಾಸಣೆಗೆ ಕ್ರಮ ತೆಗೆದುಕೊಳ್ಳುವ ಜೊತೆಗೆ ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು. ದೇವಾಲಯಗಳಲ್ಲಿ ದೇವರ ಮೂರ್ತಿ ಅಥವಾ ಮತ್ತಿತರ ವಸ್ತುಗಳನ್ನು ಮುಟ್ಟಬಾರದು. ಮೂರ್ತಿಗಳು ಹಾಗೂ ಧಾರ್ಮಿಕ ಪುಸ್ತಕಗಳನ್ನು ಸಹ ಧಾರ್ಮಿಕ ಪ್ರದೇಶಗಳಿಗೆ ಕೊಂಡೊಯ್ಯುಬಾರದು ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.
೬೫ ವರ್ಷ ಮೀರಿದವರು, ಆರೋಗ್ಯ ಸಮಸ್ಯೆ ಉಳ್ಳವರು, ಗರ್ಭಿಣಿಯರು, ೧೦ ವಯೋಮಾನಕ್ಕಿಂತ ಕೆಳಗಿನವರು. ತೀವ್ರ ಆರೋಗ್ಯ ಸಮಸ್ಯೆ ಇರುವವರು ಮನೆ ಬಿಟ್ಟು ಹೊರಗಡೆ ಬರಬಾರದು. ಯಾವುದೇ ಹಬ್ಬ ಅಥವಾ ಸಾಂಸ್ಕೃತಿಕ ಚಟುವಟಿಕೆಯನ್ನು ಕಂಟೈನ್ಮೆಂಟ್ ವಲಯದ ಹೊರಭಾಗದಲ್ಲಿ ಮಾತ್ರ ಆಯೋಜಿಸಬೇಕು. ಕಂಟೈನ್ಮೆಂಟ್ ಭಾಗದಲ್ಲಿರುವವರು ತಮ್ಮ ಧಾರ್ಮಿಕ ಆಚರಣೆಗಳನ್ನು ಮನೆಗಳಿಗೆ ಮಾತ್ರ ಸೀಮಿತಗೊಳಿಸಿಕೊಳ್ಳಬೇಕು ಎಂದು ಸೂಚಿಸಲಾಗಿದೆ.