ರಾಣೀಬೆನ್ನೂರ ಲಯನ್ಸ್ ಶಾಲೆಯಲ್ಲಿ ಆರೋಗ್ಯ ತಪಾಸಣೆ
ರಾಣೀಬೆನ್ನೂರ 14: ಮಕ್ಕಳ ಆರೋಗ್ಯ ರಕ್ಷಣೆ ಕೇವಲ ಇಲಾಖೆಗೆ ಮಾತ್ರ ಸೀಮಿತವಲ್ಲ ಅದಕ್ಕೆ ಪಾಲಕರು, ಶಿಕ್ಷಕರು ಮತ್ತು ಸಮಾಜ ಒಂದಾಗಿ ಸೇರಿ ರಕ್ಷಣೆಗೆ ಮುಂದಾಗಬೇಕಾದ ಇಂದಿನ ಬಹು ಅಗತ್ಯವಿದೆ ಎಂದು ಎಂ.ಜಿ.ಇ.ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮಲ್ಲೇಶಪ್ಪ ಅರಕೇರಿ ಹೇಳಿದರು.
ಅವರು ಬುಧವಾರ ಇಲ್ಲಿನ ಲಯನ್ಸ್ ಶಾಲಾ ಭವನದಲ್ಲಿ ಜಿಲ್ಲಾ ಆರೋಗ್ಯ ಇಲಾಖೆ ಮತ್ತು ಲಯನ್ಸ್ ಸೇವಾ ಸಂಸ್ಥೆ ಸಂಯುಕ್ತವಾಗಿ ಆಯೋಜಿಸಿದ್ದ ಮಕ್ಕಳ ಸಂಪೂರ್ಣ ಆರೋಗ್ಯ ಜಾಗೃತಿ ತಪಾಸಣಾ ಶಿಬಿರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕರೋನಾ ವೈರಸ್ ಮಹಾಮಾರಿ ರೋಗದಿಂದಾಗಿ ಇಂದು ರಾಜ್ಯದಲ್ಲಿ ಮತ್ತು ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಲಕ್ಷಾಂತರ ನಾಗರೀಕರು ಸೂಕ್ತ ಓಷಧಿ ಸಿಗದೆ ಅನೇಕ ಸಂಕಷ್ಟಗಳನ್ನು ಎದುರಿಸಿ ಕಣ್ಣೆದುರಲ್ಲೆ ಸಾವು ಕಂಡಿದ್ದು ಅತ್ಯಂತ ಘನಘೋರ ದುರಂತ ಇಂತಹ ಸಂದರ್ಭದಲ್ಲಿ 3ನೇ ಅಲೆ ಅಪ್ಪಳಿಸಲಿದೆ ಎನ್ನುವ ವಿಜ್ಞಾನಿಗಳ ವರದಿ ವಾಸ್ತವಿಕ ಸತ್ಯವೆನ್ನುವಂತೆ ಸಂಭವಿಸುತ್ತಿರುವ ಘಟನೆಗಳೆ ಸಾಕ್ಷಿಯಾಗುತ್ತಲಿವೆ. ಹಿಂದಿನ ರೀತಿ ಆಗಬಾರದು ಎನ್ನುವ ಏಕೈಕ ಮತ್ತು ದೂರದೃಷ್ಠಿಯ ಹಿನ್ನೆಲೆಯಲ್ಲಿ ಸರ್ಕಾರ ಮಕ್ಕಳ ಆರೋಗ್ಯ ತಪಾಸಣೆಗೆ ಮುಂದಾಗಿರುವ ಕ್ರಮ ಸ್ವಾಗತಾರ್ಹವಾಗಿದೆ ಎಂದರು.
ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿ ರಾಜಾಸಾಹೇಬ ಅವರು ಮಾತನಾಡಿ ಪಾಲಕರು ತಮ್ಮ ಮಕ್ಕಳನ್ನು ಮೇಲಿಂದ ಮೇಲಿಂದ ಘಮನಿಸುತ್ತಿರಬೇಕು. ಮೈ ಬಿಸಿಯಾದರೆ ತಲೆನೋವು ಬಂದರೆ ಮತ್ತಿತರೇ ಯಾವುದೇ ಶಂಕೆ ಕಂಡುಬಂದರೂ ಸಹ ನಿರ್ಲಕ್ಷ ಭಾವನೆ ತಾಳದೆ ತಕ್ಷಣವೇ ವೈದ್ಯರ ಬಳಿ ಸಾಗಿ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಅವರು ಮಕ್ಕಳಿಗೆ ಗುಣಮಟ್ಟದ ಮತ್ತು ರೋಗ-ನಿರೋಧಕ ಶಕ್ತಿ ಹೆಚ್ಚಿಸುವ ಆಹಾರವನ್ನು ಕೊಡಬೇಕು. ಇದರಿಂದ ಯಾವುದೇ ಕಾಯಿಲೆ ಬರುವುದನ್ನು ತಡೆಹಿಡಿಯಲು ಸಾಧ್ಯವಾಗುವುದು ಎಂದರು.
ಕಾರ್ಯಕ್ರಮದಲ್ಲಿ ನೂತನ ಅಧ್ಯಕ್ಷ ವೀರಣ್ಣ ತೊಗರ್ಸಿಮಳೇಮಠ ಕಾರ್ಯದರ್ಶಿ ಪ್ರಭುಲಿಂಗಪ್ಪ ಹಲಗೇರಿ, ಕೋಶಾಧ್ಯಕ್ಷ ಅಮೋಘ ಬದಾಮಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಲಿಂಗರಾಜ ಸುತ್ತಕೋಟಿ, ಸಂಸ್ಥೆಯ ಮುಖಂಡರಾದ ಟಿ.ಸಿ.ಪಾಟೀಲ, ಅಶೋಕ ಹೊಟ್ಟಿಗೌಡ್ರ, ಜಯಣ್ಣ ಮುಚಡಿ, ಬಸವರಾಜ ಬಡಿಗೇರ, ಡಾ.ರಾಜಾಸಾಹೇಬ ಸೇರಿದಂತೆ ಮತ್ತಿತರ ಗಣ್ಯರು ವರ್ತಕರು ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು. ಶಶಿಕಲಾ ಬಡಿಗೇರ ಪ್ರಾರ್ಥಿಸಿದರು, ಜಿ.ಎಂ.ಬಿದರಿ ಸ್ವಾಗತಿಸಿದರು, ಎಂ.ಜಿ.ಮಣ್ಣಮ್ಮನವರ ನಿರೂಪಿಸಿ ಎಂ.ಎಚ್.ಪಾಟೀಲ ವಂದಿಸಿದರು. ಮುಂಜಾನೆಯಿಂದ ಸಂಜೆವರೆಗೆ ನಡೆದ ಮಕ್ಕಳ ಆರೋಗ್ಯ ತಪಾಸಣಾ ಶಿಬಿರದಲ್ಲಿ 400 ಕ್ಕೂ ಹೆಚ್ಚು ಮಕ್ಕಳು ತಪಾಸಣೆಗೊಳಪಟ್ಟರು.