ರಾಜ್ಯಸಭೆಯ ಉಪ ಸಭಾಪತಿಯಾಗಿ ಹರಿವಂಶ್ ಆಯ್ಕೆ
ನವದೆಹಲಿ, ಸೆಪ್ಟೆಂಬರ್ 14: ರಾಜ್ಯಸಭೆಯ ಉಪ ಸಭಾಪತಿಯಾಗಿ ಎನ್ ಡಿ ಎ ಅಭ್ಯರ್ಥಿ ಹರಿವಂಶ್ ಚುನಾಯಿತರಾಗಿದ್ದಾರೆ ಎಂದು ಸಭಾಪತಿ ಎಂ.ವೆಂಕಯ್ಯನಾಯ್ಡು ಪ್ರಕಟಿಸಿದ್ದಾರೆ.
ಹರಿವಂಶ್ ಅವರ ಹೆಸರನ್ನು ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ರಾಜ್ಯಸಭೆಯಲ್ಲಿ ಮೊದಲು ಪ್ರಸ್ತಾಪಿಸಿದರು. ನಂತರ ತಾರ್ವಾ ಚಂದ್ ಎರಡನೇ ಪ್ರಸ್ತಾವನೆ ಮಂಡಿಸಿದರು.
ಉಪ ಸಭಾಪತಿ ಸ್ಥಾನಕ್ಕೆ ಸಭಾಪತಿ ಎಂ. ವೆಂಕಯ್ಯನಾಯ್ಡು ಧ್ವನಿಮತದ ಮೂಲಕ ಮತದಾನ ನಡೆಸಿದ ನಂತರ ಹರಿ ವಂಶ್ ಆಯ್ಕೆಗೊಂಡಿದ್ದಾರೆ ಎಂದು ಘೋಷಿಸಿದರು. ಹರಿವಂಶ್ ರಾಜ್ಯಸಭಾ ಉಪ ಸಭಾಪತಿಯಾಗಿ ಆಯ್ಕೆಗೊಂಡಿರುವುದು ಇದು ಎರಡನೇ ಬಾರಿಯಾಗಿದೆ
ಹರಿವಂಶ್ ಆಯ್ಕೆ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹರ್ಷ ವ್ಯಕ್ತಪಡಿಸಿದರು. ಪ್ರಜಾತಂತ್ರ ಬಲಪಡಿಸಲು ಅವರ ಶಕ್ತಿ ಸಾಮರ್ಥ್ಯ ಸಾಕಷ್ಟು ಪ್ರಯೋಜನಕಾರಿ ಎಂದು ಮೋದಿ ಪ್ರಶಂಸಿಸಿದರು. ವಿಪಕ್ಷ ನಾಯಕ ಗುಲಾಂ ನಬಿ ಅಜಾದ್ ನೂತನ ಉಪ ಸಭಾಪತಿಗೆ ಶುಭಾಶಯ ತಿಳಿಸಿ, ಹರಿವಂಶ್ ಎಲ್ಲ ಪಕ್ಷಗಳ ಅಭ್ಯರ್ಥಿ ಎಂದು ಅಜಾದ್ ಹೇಳಿದರು.