ಬಾಲಕಾರ್ಮಿಕರ ನಿರ್ಮೂಲನೆ ಜನಜಾಗೃತಿ ವಾಹನಕ್ಕೆ ತಾಪಂ ಇಓ ಹನುಮಂತಗೌಡ ಪಾಟೀಲ್ ಚಾಲನೆ
ಲೋಕದರ್ಶನ ವರದಿ
ಕುಷ್ಟಗಿ 12: ಬಾಲಕಾರ್ಮಿಕರ ನಿರ್ಮೂಲನೆಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನೇಕ ಬಗೆಯ ಜನಜಾಗೃತಿ ಕಾರ್ಯಕ್ರಮಗಳು ಆಯೋಜಿಸಿವೆ ಅವುಗಳ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹನುಮಂತಗೌಡ ಪೊಲೀಸ್ ಪಾಟೀಲ್ ಹೇಳಿದರು.
ಜಿಲ್ಲಾ ಆಡಳಿತ ಭವನ, ಜಿಲ್ಲಾ ಪಂಚಾಯತ್, ಕಾರ್ಮಿಕ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ಸೋಮವಾರ ಮಧ್ಯಾಹ್ನ ಇಲ್ಲಿನ ತಾಲೂಕು ಪಂಚಾಯಿತಿ ಆವರಣದಲ್ಲಿ ಬಾಲಕಾರ್ಮಿಕರ ನಿರ್ಮೂಲನೆ ಕುರಿತು ಜನಜಾಗೃತಿ ಮೂಡಿಸುವ ವಾಹನಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು 2016 ಸಾಲಿನಲ್ಲಿ 14ರಿಂದ 18 ವರ್ಷ ವಯಸ್ಸಿನ ಬಾಲಕಾರ್ಮಿಕರು ಅಪಾಯಕಾರಿ ಉದ್ಯಮಗಳಲ್ಲಿ ಕೆಲಸ ಮಾಡಬಾರದು ಎಂದು ನ್ಯಾಯಾಲಯ ಮಹತ್ವದ ತೀರ್ಪನನು ನೀಡಿದೆ ಎಲ್ಲರೂ ಗೌರವ ಸೂಚಿಸಬೇಕು ಎಂದು ಹೇಳಿದರು.
ಜಿಲ್ಲಾ ಕಾರ್ಮಿಕ ನೀರೀಕ್ಷಕ ಶಿವಶಂಕರ ತಳವಾರ ಮಾತನಾಡಿ 14 ವರ್ಷದ ಮಕ್ಕಳು ಯಾವುದೇ ತರಹದ ಉದ್ಯಮಗಳಲ್ಲಿ ಕೆಲಸ ಮಾಡಬಾರದು. ಕಾರ್ಮಿಕ ಅಧಿಕಾರಿಗಳು ಬೇಟಿ ನೀಡಿ ತಪಾಸಣೆ ಮಾಡುವ ಸಂದರ್ಭದಲ್ಲಿ ಸಿಕ್ಕಿ ಬಿದ್ದರೆ ಅಂತಹ ಮಕ್ಕಳನ್ನು ಕಾನೂನಿನ ಪ್ರಕಾರ ಬಾಲಕಾರ್ಮಿಕರು ಎಂದು ಪರಿಗಣಿಸಿ ಶಿಕ್ಷೆಗೆ ಒಳಪಡಿಸಲಾಗುತ್ತದೆ ಎಂದು ಹೇಳಿದರು.
ಬಾಲಕಾರ್ಮಿಕರ ನಿರ್ಮೂಲನೆ ಮಾಡುವ ಅನೇಕ ಜನ ಜಾಗೃತಿ ಕಾರ್ಯಕ್ರಮಗಳ ಮಾಹಿತಿಯನ್ನು ವಿವರಿಸಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತಿ ವ್ಯವಸ್ಥಾಪಕ ಬಸವರಾಜ ಪಾಟೀಲ್, ಪಂಕಜ್ ಮೇಡಮ್, ಬಾಲಕಾರ್ಮಿಕ ಯೋಜನಾ ನಿರ್ದೇಶಕ ಬಸವರಾಜ ಹಿರೇಗೌಡರ, ಮಹೇಶ್ ಬಡಿಗೇರ, ವೀರಯ್ಯ ಮೂಲಿಮಠ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.
ನಂತರ ಬಾಲಕಾರ್ಮಿಕ ನಿರ್ಮೂಲನೆ ಜನಜಾಗೃತಿ ವಾಹನವು ಕುಷ್ಟಗಿ ತಾಲೂಕಿನ ಗ್ರಾಮ ಪಂಚಾಯಿತಿ ಹಾಗೂ ವಿವಿಧ ಹಳ್ಳಿಗಳಲ್ಲಿ ಸಂಚರಿಸಿ ಜನಜಾಗೃತಿ ಮೂಡಿಸಿ ಕರಪತ್ರಗಳನ್ನು ಹಂಚಿದರು.