ಹಜ್ ಯಾತ್ರೆ ಕುರಿತು ಡಿಸೆಂಬರ್‌ನಲ್ಲಿ ಸೌದಿಯೊಂದಿಗೆ ಒಪ್ಪಂದ; ದರ ಏರಿಕೆಯ ಸಾಧ್ಯತೆ- ನಖ್ವಿ
ಶ್ರೀನಗರ,
ನ 24: ಕೋವಿಡ್ ಹಿನ್ನೆಲೆಯಲ್ಲಿ ಹಜ್-2021ರ ಪ್ರವಾಸದ ದರ ಏರಿಕೆಯಾಗಿದೆ ಎಂದು ಕೇಂದ್ರ
ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ.
ಯುಎನ್ಐ ಸುದ್ದಿಸಂಸ್ಥೆಗೆ ವಿಶೇಷ ಸಂದರ್ಶನ ನೀಡಿರುವ ನಖ್ವಿ, ಈ ಸಂಬಂಧ ಭಾರತ ಮತ್ತು ಸೌದಿ ಅರೆಬಿಯಾ ನಡುವೆ ಡಿಸೆಂಬರ್‌ನಲ್ಲಿ ಒಪ್ಪಂದಕ್ಕೆ ಸಹಿ ಹಾಕುವ ಸಾಧ್ಯತೆ ಇದೆ. ಇದರಿಂದ ಹಜ್ 2021ರಲ್ಲಿ ಭಾರತಕ್ಕೆ ಎಷ್ಟು ಸೀಟುಗಳು ದೊರೆಯಲಿವೆ ಎಂಬ ಸ್ಪಷ್ಟ ಮಾಹಿತಿ ದೊರೆಯಲಿದೆ. 2019ರ ಹಜ್ ಯತ್ರೆಯಲ್ಲಿ 2 ಲಕ್ಷ ಭಾರತೀಯರು ಪಾಲ್ಗೊಂಡಿದ್ದರು.
2020ರಲ್ಲಿ ಮಹ್ರಮ್ ಇಲ್ಲದೆ ಹಜ್‌ಗೆ ಅರ್ಜಿ ಸಲ್ಲಿಸಿದ್ದ 3 ಸಾವಿರ ಮಹಿಳೆಯರಿಗೆ 2021ನೇ ಸಾಲಿನಲ್ಲಿ ಅವಕಾಶ ಕಲ್ಪಿಸಲಾಗುವುದು. ಕೋವಿಡ್ -19 ಹಿನ್ನೆಲೆಯಲ್ಲಿ ಈ ಬಾರಿ ವಿಶೇಷ ವ್ಯವಸ್ಥೆಗಳೊಂದಿಗೆ ಯಾತ್ರೆ ಹಮ್ಮಿಕೊಳ್ಳಲಾಗುವುದು ಎಂದರು.
ಹಜ್ ಯಾತ್ರೆ ಸೌದಿ ಅರೆಬಿಯಾದಲ್ಲಿ ನಡೆಯಲಿದೆ. ಆದ್ದರಿಂದ ನಾವು ಸೌದಿ ಸರ್ಕಾರ ರೂಪಿಸುವ ನಿಯಮಗಳನ್ನು ಪಾಲಿಸಬೇಕು. ಮಾರ್ಗಸೂಚಿಗಳ ಅನುಸಾರ, ಮೊದಲು ಏಳೆಂಟು ಜನರು ಇರುತ್ತಿದ್ದ ಕೋಣೆಯಲ್ಲಿ ಈ ಬಾರಿ ಇಬ್ಬರು ಅಥವಾ ಮೂವರು ಮಾತ್ರ ಇರುತ್ತಾರೆ. ಮೊದಲು 45 ಜನರನ್ನು ಸಾಗಿಸುತ್ತಿದ್ದ ಬಸ್ ಈಗ ಕೇವಲ 20 ಜನರನ್ನು ಕೊಂಡೊಯ್ಯಲಿದೆ ಎಂದರು.
ಇಂದಹ ಪರಿಸ್ಥಿತಿಗಳು ದರಗಳು ಏರಿಕೆಯಾಗುವುದು ಸಹಜ ಎಂದಿದ್ದಾರೆ.
2020ರ ಹಜ್ ಯಾತ್ರೆ ಕುರಿತು 2019ರ ಡಿ.1ರಂದು ಭಾರತ ಮತ್ತು ಸೌದಿ ಅರೆಬಿಯಾ ನಡುವಿನ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಇದರಿಂದ ಮೆಕ್ಕಾ ಪ್ರವಾಸವನ್ನು ಸಂಪೂರ್ಣ ಡಿಜಟಲೀಕರಿಸಿದ ಮೊದಲ ದೇಶ ಭಾರತವಾಗಿ ಹೊರಹೊಮ್ಮಿತ್ತು. ಆದರೆ, ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಹಜ್ ಯಾತ್ರೆ ರದ್ದಾಗಿತ್ತು.
ಈ ವರ್ಷ ಯಾತ್ರೆಗೆ ಅವಕಾಶ ನೀಡಿರುವ ಸೌದಿ, 65 ವರ್ಷ ವಯೋಮಿತಿಯನ್ನು ಹೇರಿದೆ. ಜೊತೆಗೆ, ಯಾತ್ರೆ ಕೈಗೊಳ್ಳುವ ಯಾತ್ರಿಕರು 72 ಗಂಟೆಗಳ ಮುನ್ನ ಕೋವಿಡ್ ಪರೀಕ್ಷೆ ತೆಗೆದುಕೊಳ್ಳುವುದು ಕಡ್ಡಾಯ ಎಂದರು.
ಜೊತೆಗೆ, ಆ ಸಮಯದಲ್ಲಿ ಕೋವಿಡ್‌ಗೆ ಲಸಿಕೆ ಪತ್ತೆಯಾಗುವ ನಿರೀಕ್ಷೆಯಿದೆ ಎಂದರು.