ವಿದ್ಯಾರ್ಥಿಗಳಿಗೆ ಇಂದು ಅಂಕಿ ಇದೆ ಅಂಕಿತ ಇಲ್ಲ: ಸಿ.ಎಚ್.ಕುಲಕರ್ಣಿ
ರಾಣೀಬೆನ್ನೂರ 27: ದೇಶದಲ್ಲಿ ಇಂದು ಎಲ್ಲ ರಂಗಗಳಲ್ಲೂ ಅಸಾಮಾನ್ಯ ಬದಲಾವಣೆಗಳಾಗುತ್ತಿದ್ದು ಇದಕ್ಕೆ ಶಿಕ್ಷಣ ರಂಗ ಹೊರತಾಗಿಲ್ಲಾ ನಗರದಲ್ಲಿ ಕೂಡಾ ಸಾಕಷ್ಟು ಬದಲಾವಣೆಯಾಗಿದ್ದು 20ಕ್ಕೂ ಹೆಚ್ಚು ಇಂಗ್ಲೀಷ ಸಿಬಿಎಸ್ಇ ಮಾಧ್ಯಮದ ಶಾಲೆಗಳಿವೆ. ವಿದ್ಯಾರ್ಥಿಗಳು ಇಂದು ಅಂಕಿಗಾಗಿ ಶ್ರಮಿಸುತ್ತಿದ್ದಾರೆ. ಆದರೆ ಇವರಿಗೆ ಅಂಕಿತ ಇಲ್ಲಾ ಹಿಂದೆ ನೀವು ಕಲಿಯುವಾಗ ಗುರುಗಳ, ಪಾಲಕರ, ಹಿರಿಯರ ಅಂಕಿತ ಇತ್ತು, ಅಂಕಿಗಳು ಇರಲಿಲ್ಲ, ಆ ಅಂಕಿತವೇ ನಿಮ್ಮನ್ನು ಇಂದು ಉತ್ತುಂಗದ ಸ್ಥಿತಿಯಲ್ಲಿಟ್ಟಿದೆ. ನಿಮ್ಮ ಮಕ್ಕಳಿಗೆ ಹೆಚ್ಚು ಅಂಕಿ ನೀಡುವ ಶಿಕ್ಷಣಕ್ಕಿಂತ ನೈತಿಕ ಶಿಕ್ಷಣ ಕೊಡಿಸಲು ಮುಂದಾಗಿ ಇದರಿಂದ ದೇಶದ ಭವಿಷ್ಯ ಉನ್ನತ ಮಟ್ಟಕ್ಕೆ ಹೋಗಲು ಸಾಧ್ಯವಾಗುತ್ತದೆ ಎಂದು ನಿವೃತ್ತ ಶಿಕ್ಷಕ ಶ್ರೀ ಸಿ.ಎಚ್.ಕುಲಕರ್ಣಿ ಅವರು ಹೇಳಿದರು.
ಅವರು ದಿ:26 ರಂದು ಸಂಜೆ ನಿಂಬಾ ಇಂಟರ್ನ್ಯಾಷನಲ್ ಸಭಾಂಗಣದಲ್ಲಿ ನಡೆದ 1984ನೇ ಸಾಲಿನ ವಿದ್ಯಾರ್ಥಿಗಳಿಂದ ನಡೆದ ಗುರುವಂದನಾ ಹಾಗೂ ಪುನರ್ ಮಿಲನ ಕಾರ್ಯಕ್ರಮದಲ್ಲಿ ನೀಡಿದ ಸನ್ಮಾನಕ್ಕುತ್ತರವಾಗಿ ಮಾತನಾಡುತ್ತಾ ನಾವು ಅಂದು ವಿದ್ಯಾರ್ಥಿಗಳ ಬದುಕು ಕಟ್ಟಲು ವೇತನವನ್ನು ಬಯಸದೆ ಸೇವೆಯನ್ನು ಸಲ್ಲಿಸಿದ್ದೆವು. ವಿದ್ಯಾರ್ಥಿಗಳು ಸಾತ್ವಿಕ ಬದುಕು ಸಾಗಿಸಬೇಕು, ಪರಿಪಕ್ವ ಪುಷ್ಪಗಳಾಗಿ ಸಿಹಿ ನೀಡುವ ಮಕರಂದವಾಗಿ ಬೆಳೆದಾಗ ಮಾತ್ರ ಪಾಲಕರ ಹಾಗೂ ಶಿಕ್ಷಕರ ಶ್ರಮ ಸಾರ್ಥಕವಾಗುವುದು. ನಿಮ್ಮ ಅಭಿಮಾನ ನೋಡಿದರೆ ಅಂತಃಕರಣ ತುಂಬಿ ಬರುತ್ತಿದ್ದು ಸುಕೃತ ಜನ್ಮದ ಸಾಫಲ್ಯತೆಯನ್ನು ಪಡೆದವರು ನೀವಾಗಿದ್ದು ಸಮಾಜಕ್ಕೆ ಮಾದರಿಯಾಗುವ ಕಾರ್ಯ ಮಾಡಿದ್ದೀರೆಂದು ಹೇಳಿದರು.
ನಿವೃತ್ತ ಶಿಕ್ಷಕರಾದ ಶ್ರೀ ಜಿ.ಎಲ್.ಕುಲಕರ್ಣಿಯವರು ಮಾತನಾಡಿ ಅಂದು ನಮಗೆ ವಿದ್ಯಾರ್ಥಿಗಳಾಗಿದ್ದ ನೀವು ಸಮಾಜದಲ್ಲಿ ಆದರ್ಶ ಪಾಲಕರಾಗಿ ಹೊರಹೊಮ್ಮಿದ್ದೀರಿ, ವೃತ್ತಿ ಪ್ರತಿಭೆಯ ಯಶಸ್ಸು ಸಾಧಿಸಿದ್ದೀರಿ, ಗುರುಗಳ ಆಶೀರ್ವಾದವೇ ಈ ಸಾಧನೆಗೆ ಕಾರಣ ಎಂದು ಹೇಳಿ 1961ರಿಂದ 98 ರವರೆಗೆ ಭಗವಾನ್ದಾಸ್ ಗುಪ್ತಾ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸಿ ನಂತರಿದೇ ಶಾಲೆ ಕಾಲೇಜಾಗಿ ಪರಿವರ್ತಿತಗೊಂಡಾಗ ಪ್ರಿನ್ಸಿಪಾಲರಾಗಿ ಸೇವೆ ಸಲ್ಲಿಸಿದ್ದೇನೆ. ಈ ಸಂಸ್ಥೆ ಬಿ.ಕೆ.ಗುಪ್ತಾಜಿಯವರ ಮಹಾನ್ ಕೊಡುಗೆಯಾಗಿದ್ದು ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ನಾವೆಲ್ಲರೂ ನನ್ನ ಸಂಸಾರ ನನ್ನ ಮಕ್ಕಳೆಂಬ ಆದ್ಯತೆ ನೀಡಿ ಆಯುಷ್ಯ ಕಳೆಯುತ್ತಿದ್ದೇವೆ. ಇದರ ಬದಲು ಅನ್ಯರ ಕಷ್ಟ ಸುಖಗಳಿಗೆ ಸ್ಪಂಧಿಸಿದರೆ ಸದ್ಗತಿ ಸಿಗುತ್ತದೆ. ನೀವು ನೀಡಿದ ಸನ್ಮಾನ ಹೆಮ್ಮೆ ತಂದಿದೆ. ನಗರದಲ್ಲಿ 25 ಇಂಗ್ಲೀಷ ಮಾದ್ಯಮ ಶಾಲೆಗಳಿದ್ದು 15ಕ್ಕೂ ಹೆಚ್ಚು ಸಂಸ್ಥೆಗಳನ್ನು ನಮ್ಮ ಶಾಲೆಯ ವಿದ್ಯಾರ್ಥಿಗಳೇ ಮುಖ್ಯಸ್ಥರಾಗಿ ನಡೆಸುತ್ತಿದ್ದಾರೆ. ನೀವು ನಿಮ್ಮ ಬದುಕು ಸಾರ್ಥಕಗೊಳಿಸಿಕೊಳ್ಳಲು ಒಂದು ಉತ್ತಮ ಶಿಕ್ಷಣ ಸಂಸ್ಥೆಯನ್ನು ಆರಂಭಿಸಿ ವರ್ಷಕ್ಕೆ 5 ಸಾವಿರ ರೂ. ಫೀ ಹೆಚ್ಚದಂತೆ ಬಡವರಿಗೆ ನೆರವಾಗುವಂತಹ ಸಂಸ್ಥೆಯನ್ನು ನಡೆಸಲು ಮುಂದಾಗಬೇಕೆಂದು ಕರೆನೀಡಿದರು.
ಈ ಸಂದರ್ಭದಲ್ಲಿ ಬಿ.ಕೆ.ಗುಪ್ತಾ ಸಂಸ್ಥೆಯ ನಿವೃತ್ತ ಶಿಕ್ಷಕರುಗಳಾದ ಸರ್ವಶ್ರೀ ಎಸ್.ಬಿ.ಗುಡಿಹಾಳ, ಎಚ್.ಪಿ.ಸುಭಾಸ್, ಎಸ್.ಎಸ್.ಕುಲಕರ್ಣಿ, ಎಚ್.ಡಿ.ಬಡಕರಿಯಪ್ಪನವರ, ಕಮ್ಮಾರ, ಅಡಿಗೇರ, ಹನುಂತರಡ್ಡೇರ ಹಾಗೂ ಆಡಳಿತ ಮಂಡಳಿಯ ಶ್ರೀನಿವಾಸ ಸಾವಕಾರ, ಪೂರ್ಣಚಂದ್ರ ಗುಪ್ತಾ ಸಿಬ್ಬಂಧಿ ಪರವಾಗಿ ರಂಗಪ್ಪ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಖ್ಯಾತ ಉದ್ಯಮಿ ಶ್ರೀ ನಾರಾಯಣ ವಿ.ಕೋಪರ್ಡೆ ವಹಿಸಿದ್ದರು, ಪ್ರಾರಂಭದಲ್ಲಿ ಗಚ್ಚಿನಮಠ ಪ್ರಾರ್ಥಿಸಿ ಲಕ್ಷಣ ಚಿಂತಾ ಸ್ವಾಗತಿಸಿ ಸುದೀಂದ್ರ ಕುರವತ್ತಿ, ಸಣ್ಣಿಂಗಣ್ಣನವರ ಕಾರ್ಯಕ್ರಮ ನಿರೂಪಿಸಿದರು. ಪ್ರಾಸ್ತಾವಿಕವಾಗಿ ನೈಜಿರಿಯಾದಲ್ಲಿರುವ ಪಂಪಣ್ಣ ನಾಯಕರವರು ಮಾತನಾಡಿದರು. ಕೊನೆಗೆ ಗೀರೀಶ ಬಳ್ಳಾರಿ ವಂದಿಸಿದರು.