ವಿಜ್ರಂಭಣೆಯಿಂದ ಗುಂಡೇವಾಡಿ ಕಾಡಸಿದ್ಧೇಶ್ವರ ದೇವಸ್ಥಾನದ ಜಾತ್ರೆ
ಕುದುರೆ ಗಾಡಿ ಶರ್ಯತ್ತು, ಟಗರಿನ ಕಾಳಗ, ಕಬಡ್ಡಿ, ಕುಸ್ತಿ ವಿವಿಧ ದೇಶಿ ಕ್ರೀಡೆ ಶ್ರೀ ಕೃಷ್ಣ ಪಾರಿಜಾತ ಬಯಲಾಟ ಆಕರ್ಷಣೀಯ
ಅಥಣಿ 12: ಗುಂಡೇವಾಡಿ ಕಾಡಸಿದ್ಧೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ ಕುದುರೆ ಗಾಡಿ ಶರ್ಯತ್ತು, ಟಗರಿನ ಕಾಳಗ, ಸೈಕಲ್ ಸ್ಪರ್ಧೆ, ಮುಕ್ತ ರಕ್ತ ದಾನ ಶಿಬಿರ, ತೆರಬಂಡಿ ಸ್ಪರ್ಧೆ, ಕಬಡ್ಡಿ, ಸಂಗ್ರಾಮ ಕಲ್ಲು ಎತ್ತುವ ಮತ್ತು ಗುಂಡು ಎತ್ತುವ ಸ್ಪರ್ಧೆ ಮತ್ತು ಜಂಗೀ ನಿಕಾಲಿ ಕುಸ್ತಿಗಳು ಹಾಗೂ ಶ್ರೀ ಕೃಷ್ಣ ಪಾರಿಜಾತ ಬಯಲಾಟ ಪ್ರಮುಖ ಆಕರ್ಷಣೀಯವಾಗಿದ್ದವು.
ಈ ಸಂದರ್ಭದಲ್ಲಿ ಮಾತನಾಡಿದ ಕೃಷ್ಣಾ ಸಹಕಾರಿ ಸಕ್ಕರೆ ಕಾರಖಾನೆಯ ನಿರ್ದೇಶಕ ಘೂಳಪ್ಪ ಜತ್ತಿ, ಯಾವುದೇ ಜಾತಿ, ಮತ, ಪಂಥ, ಧರ್ಮ ಎನ್ನುವ ಭೇದ, ಭಾವ ಇಲ್ಲದೆ ನಮ್ಮೂರಿನ ಕಾಡ ಸಿದ್ದೇಶ್ವರ ಜಾತ್ರಾ ಮಹೋತ್ಸವ ಅತ್ಯಂತ ವಿಜ್ರಂಭಣೆಯಿಂದ ನಡೆಯುತ್ತಿದ್ದು, ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಎಲ್ಲ ಭಕ್ತರಿಗೆ ಮೂರೂ ದಿನ ಅನ್ನ ಪ್ರಸಾದದ ವ್ಯವಸ್ಥೆ ಆಯೋಜಿಸಲಾಗಿದೆ ಎಂದ ಅವರು ಕಾಡಸಿದ್ಧೇಶ್ವರ ಪಲ್ಕಕ್ಕಿ ಉತ್ಸವ ಜೊತೆಗೆ ಅನೇಕ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗುತ್ತವೆ ಎಂದು ಹೇಳಿದರು.
ರಕ್ತ ದಾನ ಮಾಡಿ ನಂತರ ಮಾತನಾಡಿದ ಗ್ರಾಮದ ಹಿರಿಯ ಮುಖಂಡ ಬಸವರಾಜ ಅಂಗಡಿ, ಅಥಣಿ ರಕ್ತ ನಿಧಿ ಕೇಂದ್ರದಿಂದ ಜಾತ್ರಾ ಮಹೋತ್ಸವದ ಅಂಗವಾಗಿ ಗ್ರಾಮೀಣ ಜನರಲ್ಲಿ ರಕ್ತ ದಾನದ ಜಾಗೃತಿ ಮೂಡಿಸುವ ಉದ್ದೇಶದಿಂದ ಆಯೋಜಿಸಿರುವ ರಕ್ತ ದಾನ ಶಿಬಿರಕ್ಕೆ ಹೆಚ್ಚಿನ ಜನ ಆಗಮಿಸಿ ರಕ್ತ ದಾನ ಮಾಡಿ ಮತ್ತೊಬ್ಬರ ಜೀವ ಉಳಿಸಬೇಕು ಎಂದು ಕರೆ ನೀಡಿದ ಅವರು ನಾವು ನೀಡಿದ ರಕ್ತ ಕೇವಲ ಮೂರು ಗಂಟೆಗಳ ಅವಧಿಯಲ್ಲಿಯೇ ಮತ್ತೆ ನಮ್ಮ ದೇಹದಲ್ಲಿ ಉತ್ಪತ್ತಿಯಾಗುತ್ತದೆ ಹೀಗಾಗಿ ಹೆಚ್ಚು ಹೆಚ್ಚು ಜನ ರಕ್ತ ದಾನಕ್ಕೆ ಮುಂದಾಗಬೇಕೆಂದರು.
ಗ್ರಾಮ ಪಂಚಾಯತ ಸದಸ್ಯ ಗುರುಶಾಂತ ಗೆಜ್ಜಿ ಮಾತನಾಡಿ, ಸರ್ವ ಧರ್ಮದ ಸಂಕೇತದಂತೆ ನಡೆಯುವ ಕಾಡ ಸಿದ್ದೇಶ್ವರ ಜಾತ್ರಾ ಮಹೋತ್ಸವ ಭಾವೈಕ್ಯತೆಯ ಸಂಕೇತ ಎಂದ ಅವರು ಜಾತ್ರೆಯಲ್ಲಿ ಗ್ರಾಮೀಣ ಕ್ರೀಡೆಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದೇವೆ ಎಂದು ಹೇಳಿದರು.
ಜಾತ್ರಾ ಮಹೋತ್ಸವದ ಸಾನಿಧ್ಯವನ್ನು ಚನ್ನಮಲ್ಲಿಕಾರ್ಜುನ ಸ್ವಾಮೀಜಿ ವಹಿಸಿದ್ದರು. ಅಥಣಿ ರಕ್ತ ನಿಧಿ ಸಂಸ್ಥಾಪಕ ಮೆಹಬೂಬ ಮುಜಾವರ ರಕ್ತ ದಾನ ಶಿಬಿರ ಆಯೋಜಿಸಿದ್ದರು. ಜಾತ್ರಾ ಮಹೋತ್ಸವದ ನೇತೃತ್ವವನ್ನು ಶಿವಾನಂದ ಗೊಲಭಾವಿ, ಗುರ್ಪ ಜತ್ತಿ, ಕುಮಾರಗೌಡ ಪಾಟೀಲ, ಅಬಾಸಾಹೇಬ ಚವ್ಹಾಣ, ಅಣ್ಣುಗೌಡ ಪಾಟೀಲ, ಪದಮಣ್ಣಾ ಬಣಜವಾಡ, ಬಿಸಲಪ್ಪ ನಾಯಿಕ, ಶ್ರೀಮಂತ ವೀರ, ಮಹಾದೇವ ಗುಂಜಿಗಾಂವಿ, ಕಲಗೌಡ ಪಾಟೀಲ, ವಿಶ್ವನಾಥ ಪಾಟೀಲ, ಗುರುಶಾಂತ ಗೆಜ್ಜಿ, ರಾಮಗೊಂಡಾ ಪಾಟೀಲ, ಪಾಪಾಚಂದ ಬಣಜವಾಡ ಸೇರಿದಂತೆ ಅನೇಕರು ವಹಿಸಿದ್ದರು.