ಗೃಹಲಕ್ಷ್ಮಿ ಯೋಜನೆ: ಮೃತ ಫಲಾನುಭವಿಗಳ ಖಾತೆಯಲ್ಲಿರುವ ಹಣ ಮರುಪಾವತಿಗೆ ಕ್ರಮ

ಗೃಹಲಕ್ಷ್ಮಿ ಯೋಜನೆ: ಮೃತ ಫಲಾನುಭವಿಗಳ ಖಾತೆಯಲ್ಲಿರುವ ಹಣ ಮರುಪಾವತಿಗೆ ಕ್ರಮ  Gruha Lakshmi Scheme: Measures to recover funds from the accounts of deceased beneficiaries

ಬಳ್ಳಾರಿ 10: ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಯಡಿ ಕೇಂದ್ರ ಕಚೇರಿ ಪಟ್ಟಿಯ ಪ್ರಕಾರ 5,972 ಮಂದಿ ಮೃತ ಫಲಾನುಭವಿಗಳಾಗಿದ್ದು, ಅವರಲ್ಲಿ 3,748 ಮಂದಿಯ ಖಾತೆಗೆ ಯಾವುದೇ ಹಣ ಜಮೆಯಾಗಿಲ್ಲ. ಉಳಿದ 2,224 ಮೃತ ಫಲಾನುಭವಿಗಳ ಖಾತೆಗಳಿಗೆ ಜಮೆಯಾಗಿರುವ ಒಟ್ಟು ರೂ.2.28 ಕೋಟಿ ಹಣವನ್ನು ಸರ್ಕಾರದ ನಿಯಮಾನುಸಾರ ನಾಮಿನಿಗಳ ಒಪ್ಪಿಗೆ ಪಡೆದು ಮರುಪಾವತಿಸಲು ಬ್ಯಾಂಕ್ಗಳೊಂದಿಗೆ ಸಮನ್ವಯ ಸಾಧಿಸಬೇಕು ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ. ಚಿದಾನಂದಪ್ಪ ಸೂಚಿಸಿದರು.  

ನಗರದ ಕೋಟೆ ಪ್ರದೇಶದ ಜಿಲ್ಲಾ ಪಂಚಾಯಿತಿ ಹಳೆಯ ನಜೀರ್ ಸಾಬ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಗತಿ ಪರೀಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.  ಗೃಹಲಕ್ಷ್ಮಿ ಯೋಜನೆ ಆರಂಭವಾದ ಆಗಸ್ಟ್‌ 2023ರಿಂದ ಮಾರ್ಚ್‌ 2026ರವರೆಗೆ ಜಿಲ್ಲೆಯಲ್ಲಿ ಪ್ರತಿ ಫಲಾನುಭವಿಗೆ ಮಾಸಿಕ ರೂ.2 ಸಾವಿರದಂತೆ ಒಟ್ಟು ರೂ.1667.58 ಕೋಟಿ ಅನುದಾನ ಪಾವತಿಸಲಾಗಿದೆ. ಸಾರ್ವಜನಿಕರ ಹಣ ದುರುಪಯೋಗವಾಗದಂತೆ ತಡೆಯಲು ಮೃತ ಫಲಾನುಭವಿಗಳ ನಿಖರ ಮಾಹಿತಿಯನ್ನು ಪತ್ತೆಹಚ್ಚಿ ಅರ್ಹರಿಗೆ ಮಾತ್ರ ಯೋಜನೆಯ ಸೌಲಭ್ಯ ತಲುಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.  

ಕೇವಲ ಸಾಫ್ಟ್ವೇರ್ ವರದಿಗಳನ್ನೇ ಅವಲಂಬಿಸದೆ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರ ಮೂಲಕ ಸ್ಥಳೀಯ ಮಟ್ಟದಲ್ಲಿ ಮರು ಪರೀಶೀಲನೆ ನಡೆಸುವಂತೆ ಸೂಚನೆ ನೀಡಲಾಯಿತು.  ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಯಾವುದೇ ಹೊಸ ಅರ್ಜಿ ಪ್ರಕ್ರಿಯೆಗಳು ಇಂಟರ್ನೆಟ್ ಕೇಂದ್ರಗಳಲ್ಲಿ ಆರಂಭವಾಗಿಲ್ಲ. ಸಾರ್ವಜನಿಕರು ಗೊಂದಲಕ್ಕೆ ಒಳಗಾಗದೆ ಸೈಬರ್ ಕೇಂದ್ರ ಅಥವಾ ಗ್ರಾಮ ಒನ್ ಕೇಂದ್ರಗಳಿಗೆ ತೆರಳಬಾರದು. ಮುಂದಿನ ದಿನಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ಪರೀಶೀಲನೆ ನಡೆಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.