ಅದ್ದೂರಿಯಾಗಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ
ಬಳ್ಳಾರಿ,ಅ.26 : ನಗರದಾದ್ಯಂತ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು. ನಗರದ ರಾಯಲ್ ಸರ್ಕಲ್ ನಿಂದ ಆರಂಭವಾದ ಮಹರ್ಷಿ ವಾಲ್ಮೀಕಿ ಮಹರ್ಷಿಯ ಭಾವಚಿತ್ರ ಮೆರವಣಿಗೆಯು ಶ್ರೀ ಕನಕ ದುರ್ಗಮ್ಮ ದೇವಸ್ಥಾನದ ವೃತ್ತದ ಮೂಲಕ ವಾಲ್ಮೀಕಿ ವೃತ್ತದವರೆಗೆ ಸಾಗಿತು. ಡೊಳ್ಳು ಕುಣಿತ ಹಾಗೂ ಡಿಜೆ ಸಂಗೀತದ ಅಬ್ಬರದೊಂದಿಗೆ ನಡೆದ ಮೆರವಣಿಗೆಯಲ್ಲಿ ಯುವಕರು ಸಂಭ್ರಮದಿಂದ ಪಾಲ್ಗೊಂಡರು.
ಈ ಸಂದರ್ಭದಲ್ಲಿ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ, ಮಾಜಿ ಸಚಿವರು ಹಾಗೂ ಹಾಲಿ ಬಳ್ಳಾರಿ ಗ್ರಾಮಾಂತರ ಶಾಸಕರಾದ ಬಿ.ನಾಗೇಂದ್ರ ಅವರ ಸಹೋದರ ಮತ್ತು ಕೆಡಿಪಿ ಸಮಿತಿಯ ಅಧಿಕಾರೇತರ ಸದಸ್ಯರಾದ ಬಿ. ವೆಂಕಟೇಶ್ ಪ್ರಸಾದ್, ಮಾಜಿ ಸಚಿವ ಬಿ. ಶ್ರೀರಾಮುಲು ಹಾಗೂ ಕಾಂಗ್ರೆಸ್ನ ಹಿರಿಯ ನಾಯಕ ಎನ್.ವೈ ಸ್ವಾಮಿ ಅವರು ಸೇರಿದಂತೆ ಗಣ್ಯರು ಶ್ರೀ ಮಹರ್ಷಿ ವಾಲ್ಮೀಕಿ ಗುರುಗಳ ಮೂರ್ತಿಯ ಮೆರವಣಿಗೆಗೆ ಚಾಲನೆ ನೀಡಿದರು. ಡೊಳ್ಳು ಕುಣಿತ ಮತ್ತು ಡಿಜೆ ಸಂಗೀತಕ್ಕೆ ಯುವಕರು ಹೆಜ್ಜೆ ಹಾಕುವ ಮೂಲಕ ಜಯಂತಿಯ ಸಂಭ್ರಮವನ್ನು ಹೆಚ್ಚಿಸಿದರು.
ಬಳ್ಳಾರಿ ಗ್ರಾಮಾಂತರ ಶಾಸಕ ಬಿ.ನಾಗೇಂದ್ರ ಅವರಿಂದ ಸುಮಾರು 5,000 ಜನರಿಗೆ ಊಟದ ವ್ಯವಸ್ಥೆ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಪ್ರಯುಕ್ತ ಮೆರವಣಿಗೆಯಲ್ಲಿ ಭಾಗವಹಿಸಲು ಆಗಮಿಸಿದ ಸಾರ್ವಜನಿಕರಿಗೆ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಬಿ.ನಾಗೇಂದ್ರ ಅವರ ವತಿಯಿಂದ ಸುಮಾರು 5,000 ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.
*ಸಮಾಜದ ಒಗ್ಗಟ್ಟಿಗೆ ಕರೆ ಈ ಬಾರಿ ಜಯಂತಿ ಮೆರವಣಿಗೆ ಅತ್ಯಂತ ಅದ್ದೂರಿಯಾಗಿ ನಡೆದಿರುವುದು ಸಂತೋಷದ ಸಂಗತಿ ಎಂದು ಸಮುದಾಯದ ಮುಖಂಡರು ಅಭಿಪ್ರಾಯಪಟ್ಟರು. ಜಯಂತಿ ಆಚರಣೆಗೆ ಮಾತ್ರ ಸೀಮಿತವಾಗದೆ, ಮುಂದಿನ ದಿನಗಳಲ್ಲಿಯೂ ಸಮಾಜದ ಅಭಿವೃದ್ಧಿ, ಶೈಕ್ಷಣಿಕ ಪ್ರಗತಿ ಹಾಗೂ ವಿವಿಧ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.
ಮಹರ್ಷಿ ವಾಲ್ಮೀಕಿ ಅವರ ಆದರ್ಶಗಳು, ಸಂದೇಶಗಳು ಹಾಗೂ ಮೌಲ್ಯಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಮಾಜದಲ್ಲಿ ಒಗ್ಗಟ್ಟು, ಪರಸ್ಪರ ಸಹಕಾರ ಮತ್ತು ಸಹಬಾಳ್ವೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಮುಖಂಡರು ತಿಳಿಸಿದರು. ಮೆರವಣಿಗೆಯಲ್ಲಿ ವಾಲ್ಮೀಕಿ ಸಮುದಾಯದ ನಾಯಕರು, ಮುಖಂಡರು, ವಿವಿಧ ಸಮುದಾಯಗಳ ಪ್ರತಿನಿಧಿಗಳು, ಯುವಕರು, ಮಹಿಳೆಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.