ಗ್ರಾಮ ಆರೋಗ್ಯ ಅಭಿಯಾನ ಕಾರ್ಯಕ್ರಮದ ಪ್ರಗತಿ ಪರೀಸೀಲನಾ ಸಭೆ
ಶಿಗ್ಗಾವಿ 21: ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕಡ್ಡಾಯವಾಗಿ 5 ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ, ಪ್ರಗತಿ ಕುಂಟಿತಗೊಂಡಿರುವ ಗ್ರಾಮ ಆರೋಗ್ಯ ಅಭಿಯಾನ ಕಾರ್ಯಕ್ರಮವನ್ನು ಇನ್ನು ಉತ್ತಮ ರೀತಿಯಲ್ಲಿ ಯಶಸ್ವೀಗೊಳಿಸಬೇಕು ಎಂದು ತಾಪಂ ಇಓ ಪಿ.ವಿಶ್ವನಾಥ ಹೇಳಿದರು.
ಪಟ್ಟಣದ ತಾಪಂ ಸಭಾಭವನದಲ್ಲಿ ಆಯೋಜಿಸಲಾಗಿದ್ದ ಗ್ರಾಮ ಆರೋಗ್ಯ ಅಭಿಯಾನ ಕಾರ್ಯಕ್ರಮದ ಪ್ರಗತಿ ಪರೀಸೀಲನಾ ಸಭೆಯಲ್ಲಿ ಮಾತನಾಡಿದ ಅವರು, ಯೋಜನೆ ಕೇವಲ ಶೇ.50 ಪ್ರಗತಿಯಾಗಿದ್ದು, ಯೋಜನೆ ಉತ್ತಮ ಮಟ್ಟದಲ್ಲಿ ಪ್ರಗತಿ ಕಾಣಲು ಬೇಕಾದ ವ್ಯವಸ್ಥೆಯನ್ನು ಮಾಡಿಕೊಂಡು ಕಾರ್ಯಕ್ರಮನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋಗಲು ಅಧಿಕಾರಿಗಳಿಗೆ ಸೂಚಿಸಿದರು.
ಅಭಿಯಾನದ ಜಿಲ್ಲಾ ಸಂಯೋಜಕಿ ರೇಣುಕಾ ಕಹಾರ ಮಾತನಾಡಿ, ಕೆ.ಹೆಚ್.ಪಿ.ಟಿ ಗ್ರಾಮ ಆರೋಗ್ಯ ಅಭಿಯಾನ ಕಾರ್ಯಕ್ರಮವು ಆರೋಗ್ಯ ಇಲಾಖೆ ಮತ್ತು ಗ್ರಾಪಂಗಳ ಸಹಯೋಗದಲ್ಲಿ ನಡೆಯುತ್ತಿದ್ದು, ಪ್ರತಿ ಹಳ್ಳಿಯ ಕಟ್ಟ ಕಡೆಯ ವ್ಯಕ್ತಿಯನ್ನು ಎನ್.ಸಿ.ಡಿ ಪರೀಕ್ಷೆಗೆ ಒಳಪಡಿಸುವುದು, ಉತ್ತಮ ಆರೋಗ್ಯ ಕಾಪಡಿಕೊಳ್ಳಲು ಅವಶ್ಯವಿರುವ ವಸ್ತುಗಳನ್ನು ಪೂರೈಸುವುದರೊಂದಿಗೆ ಮಾನಸಿಕ ಸಮಸ್ಯಗಳಿಗೆ ಅರಿವು ಮತ್ತು ಬಾಲ್ಯ ವಿವಾಹ ತಡೆಯುವ ಉದ್ದೇಶ ಹೊಂದಿದೆ.
ಮುಂದಿನ ದಿನಗಳಲ್ಲಿ ಆಯಾ ಗ್ರಾಪಂಗಳಲ್ಲಿ ರಚನೆಯಾಗಿದ್ದ ಕಾವಲು ಪಡೆಯ ಸಹಕಾರ ಪಡೆದು, ಯೋಜನೆ ಲಾಭ ಪ್ರತಿಯೊಬ್ಬರಿಗೆ ಸಿಗುವಂತೆ ಮಾಡುವ ಮೂಲಕ ತಾಲೂಕಿನಲ್ಲಿ ಪ್ರತಿ ತಿಂಗಳಿನಲ್ಲಿ ನಾಲ್ಕೈದು ಕಾರ್ಯಕ್ರಮ ಆಯೋಜಿಸಿ, ಪ್ರತಿಶತ ಪ್ರಗತಿ ಸಾಧಿಸಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತಾಲೂಕಾ ಆರೋಗ್ಯ ಅಧಿಕಾರಿ ಡಾ. ಸತೀಶ್, ತಾಲ್ಲೂಕ ಯೋಜನಾಧಿಕಾರಿಗಳಾದ ಎಸ್.ಎನ್. ಸಣ್ಣಕ್ಕಿ, ಶಿವಾನಂದ ಗದಿಗೇರ, ಸಹಾಯಕ ನಿರ್ದೇಶಕ ಪ್ರಕಾಶ್ ಓಂಧಕರ, ಸಮುದಾಯ ಆರೋಗ್ಯ ಅಧಿಕಾರಿಗಳು, ಸುರಕ್ಷತಾ ಅಧಿಕಾರಿಗಳು, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಸಹಾಯಕ ನಿರ್ದೇಶಕರು ಸೇರಿದಂತೆ ಇತರರು ಇದ್ದರು