ಸರಕಾರಿ ಶಾಲೆಗಳನ್ನು ಮಾದರಿ ಶಾಲೆಗಳಾಗಬೇಕು - ಬಡ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಬೇಕು - ಶಿವಕುಮಾರನ್
ಕಾರವಾರ 04: ಶಿಥಿಲಾವ್ಯಸ್ಥೆಯಲ್ಲಿದ್ದಂತಹ ಸರಕಾರಿ ಶಾಲೆಗಳನ್ನು ಮಾದರಿ ಶಾಲೆಗಳನ್ನಾಗಿ ಮಾಡುವುದರ ಜೊತೆಗೆ ಬಡ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕೆಂಬುದೇ ನಮ್ಮ ಉದ್ದೇಶ ಎಂದು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕ ಶಿವಕುಮಾರನ್ ಹೇಳಿದರು.
ನಗರದ ಬಜಾರ ಶಾಲೆಯನ್ನು ಭಾರತ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಕಂಪನಿ ವತಿಯಿಂದ ನಿರ್ಮಿಸಿದ ನೂತನ ಕಟ್ಟಡವನ್ನು ಉದ್ಘಾಟಿಸಿ ನಂತರ ಕಾರವಾರ ಶಿಕ್ಷಣ ಇಲಾಖೆಗೆ ಹಸ್ತಾಂತರಿಸಿ ಮಾತನಾಡಿದ ಅವರು, ಖಾಸಗಿ ಶಾಲೆಗಳಿಗೆ ಹೋಲಿಸಿದರೆ ಯಾವುದರಲ್ಲೂ ಕಡಿಮೆ ಇರದಂತೆ ನಿರ್ಮಾಣಗೊಂಡ ಈ ಶಾಲೆಯಲ್ಲಿ ಬಡಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದೇ ನಮ್ಮ ಉದ್ದೇಶವಾಗಿದೆ ಎಂದರು.
ಬಿಇಎಲ್ ಕಂಪನಿಯು ಶಿಕ್ಷಣ, ಆರೋಗ್ಯ ಹಾಗೂ ಪರಿಸರ ಸಂರಕ್ಷಣೆಯಂತಹ ಸಾಮಾಜಿಕ ಹೊಣೆಗಾರಿಕೆ ಕಾರ್ಯಗಳ ವಿಚಾರದಲ್ಲಿ ಮುಂಚೂಣಿಯಲ್ಲಿದೆ. 107 ವರ್ಷಗಳ ಇತಿಹಾಸ ಇದ್ದಂತಹ ಬಝಾರ ಶಾಲೆಯ ಕಟ್ಟಡದ ಶಿಥಿಲಾವಸ್ಥೆಯನ್ನು ತಮ್ಮ ಸರ್ವೆ ಮೂಲಕ ಗುರುತಿಸಿದ ಬಿಇಎಲ್ ಉತ್ತಮ ಕಟ್ಟಡ ಹಾಗೂ ಪೀಠೋಪಕರಣಗಳನ್ನು ನೀಡಿದೆ. ಇವುಗಳನ್ನು ಉತ್ತಮ ರೀತಿಯಲ್ಲಿ ನಿಭಾಯಿಸಿಕೊಳ್ಳುವುದು ಶಿಕ್ಷಕರು ಹಾಗೂ ಎಸ್‌ಡಿಎಂಸಿ ಅಧ್ಯಕ್ಷ ಮತ್ತು ಸದಸ್ಯರ ಜವಾಬ್ದಾರಿಯಾಗಿದೆ. ಉತ್ತಮ ಶಿಕ್ಷಕ ವೃಂದ ಮತ್ತು ಮುಖ್ಯೋಪಾಧ್ಯಾಯರನ್ನು ಹೊಂದಿರುವ ಈ ಶಾಲೆಯು, ವಿಧ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಾಕ್ಷಿಯಾಗಲಿದೆ ಎಂದು ಅಭಿಪ್ರಾಯಪಟ್ಟರು. ಶಾಲೆ ನೂತನ ಕಟ್ಟಡ ನಿರ್ಮಿಸಲು ಕಾರಣರಾದ ಹಿಂದಿನ ಸಿಇಓ ಮೊಹಮ್ಮದ್ ರೋಶನ್ ಮತ್ತು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಗರಾಜ ಹರಪನಹಳ್ಳಿ ಅವರ ಸಹಕಾರವನ್ನು ಅವರು ಸ್ಮರಿಸಿದರು.
ಕಾರವಾರ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಹರೀಶ್ ಗಾಂವ್ಕರ್ ಮಾತನಾಡಿ ಕೋವಿಡ್-19 ಕಾರಣದಿಂದ ಶಾಲೆಗಳು ಮುಚ್ಚಲ್ಪಟ್ಟಿದ್ದವು. ಆದರೆ ಸುಸಜ್ಜಿತವಾದ ಹೊಸ ಕಟ್ಟಡ ಕಂಡು ಹೊಸ ಹುಮ್ಮಸ್ಸಿನಿಂದ ಶಿಕ್ಷಕರು ಉತ್ತಮ ಶಿಕ್ಷಣ ನೀಡಲು ಮಾನಸಿಕವಾಗಿ ಸಿದ್ಧರಾಗಿದ್ದಾರೆ. ಈಗಾಗಲೆ 90 ವಿದ್ಯಾರ್ಥಿಗಳು ಆಂಗ್ಲ ಮಾಧ್ಯಮಕ್ಕೆ ಪ್ರವೇಶ ಪಡೆದಿದ್ದು, ಉತ್ತಮ ಶಿಕ್ಷಣ ನೀಡುವುದೇ ನಮ್ಮ ಧ್ಯೇಯವಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾರವಾರ ನಗರಸಭೆಯ ಅಧ್ಯಕ್ಷ ನಿತಿನ್ ಪಿಕಳೆ ವಹಿಸಿದ್ದರು. ಶಾಲೆಯ ಹಳೆಯ ವಿದ್ಯಾರ್ಥಿ ಪ್ರೇಮಾನಂದ್ ಗುನಗಾ, ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಬಸವರಾಜ ಪೂಜಾರ ಅವರಿಗೆ ಶಿಕ್ಷಕ ವೃಂದದವರು ಸನ್ಮಾನಿಸಿದರು. ಶಾಲೆಯ ಮುಖ್ಯ ಶಿಕ್ಷಕಿ ಮಾಲಾ ಸ್ವಾಗತಿಸಿದರು. ಶಿಕ್ಷಕಿ ಶೈಲಾ ನಿರೂಪಿಸಿದರು.