ವಿಕಲಚೇತನರ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧ: ಸಚಿವ ಹಾಲಪ್ಪ ಆಚಾರ್
ಲೋಕದರ್ಶನ ವರದಿ
ಯಲಬುರ್ಗಾ 21: ವಿಕಲಚೇತನರಿಗೆ ಅವಶ್ಯಕ ಇರುವ ಸಾಮಗ್ರಿ ಸಲಕರಣೆ ಹಾಗೂ ಜೀವನೋಪಾಯಕ್ಕಾಗಿ ಬೇಕಾಗುವ ಅಗತ್ಯತೆಗಳನ್ನು ಕಲ್ಪಿಸುವುದರ ಜೊತೆಗೆ ವಿಕಲಚೇತನರ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಚಿವ ಹಾಲಪ್ಪ ಆಚಾರ್ ಹೇಳಿದರು.
ಪಟ್ಟಣದ ಬಯಲು ರಂಗ ಮಂದಿರದಲ್ಲಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಹಮ್ಮಿಕೊಂಡಿದ್ದ ದೈಹಿಕ ವಿಕಲಚೇತನರಿಗೆ ಯಂತ್ರ ಚಾಲಿತ ದ್ವಿಚಕ್ರ ವಾಹನಗಳ ಮತ್ತು ಅಂಧ ವಿದ್ಯಾರ್ಥಿಗಳಿಗೆ ಟಾಕಿಂಗ್ ಲ್ಯಾಪ್ ಟಾಪ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಂಗವೈಕಲ್ಯ ಎಂಬುದು ಶಾಪವೂ ಅಲ್ಲ , ಸಾಧನೆಗೆ ಅಡ್ಡಿಯೂ ಅಲ್ಲ. ಆದರೆ, ವಿಕಲಚೇತನರು ಕೀಳರಿಮೆಯಿಂದ ಹೊರ ಬನ್ನಿ. ಸರ್ಕಾರದಿಂದ ಪಡೆದುಕೊಳ್ಳುವ ಪ್ರತಿ ಯೋಜನೆಯು ಸದ್ಬಳಕೆಯಾಗುವಂತೆ ನೋಡಿಕೊಳ್ಳಬೇಕು ಎಂದರು.
ಪಪಂ ಅಧ್ಯಕ್ಷ ಅಮರೇಶ ಹುಬ್ಬಳ್ಳಿ ಅಧ್ಯಕ್ಷತೆ ವಹಿಸಿದ್ದರು. ಪಾಪಂ ಉಪಾಧ್ಯಕ್ಷ ಶಾಂತಮ್ಮ ಮಾಟೂರು , ಪಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಕಳಕಪ್ಪ ತಳವಾರ , ತಾಪಂ ಇಒ ಸಂತೋಷ ಪಾಟೀಲ್ ಬಿರಾದಾರ , ಸಿಡಿಪಿಒ ಸಿಂಧು ಯಲಿಗಾರ , ಜಿಪಂ ಮಾಜಿ ಸದಸ್ಯ ಸಿ.ಎಚ್ .ಪಾಟೀಲ್ , ತಾಪಂ ಮಾಜಿ ಅಧ್ಯಕ್ಷ ಶಿವಕುಮಾರ್ ನಾಗಲಾಪುರ , ಉಪಾಧ್ಯಕ್ಷ ಕಳಕಪ್ಪ ಕಂಬಳಿ , ಸದಸ್ಯ ಶರಣಪ್ಪ ಈಳಿಗೇರ , ಮುಖಂಡರಾದ ಈರಣ್ಣ ಹುಬ್ಬಳ್ಳಿ , ಸಿದ್ದರಾಮೇಶ ಹುಬ್ಬಳ್ಳಿ ಬೇಲೇರಿ , ಜಿಲ್ಲಾ ವಿಕಲಚೇತನರ ಕಲ್ಯಾಣ ಅಧಿಕಾರಿ ಶ್ರೀದೇವಿ ನಿಡಗುಂದಿ , ಎಂಆರ್ ಡಬ್ಲ್ಯೂ ಬಸವನಗೌಡ ಬನ್ನಪ್ಪಗೌಡ್ರ , ಈರ್ಪ ಕರೆಕುರಿ , ವೀರಭದ್ರ್ಪ ತಮ್ಮಿನಾಳ ಇತರರು ಇದ್ದರು.