ಮನೆ ಬಾಗಿಲಿಗೆ ಆಡಳಿತ- ಸರ್ಕಾರದ ಸೌಲಭ್ಯಗಳು ತಕ್ಷಣ ತಲುಪಲಿ: ಶಾಸಕ ವಿಶ್ವಾಸ ವೈದ್ಯ
ಸವದತ್ತಿ 06 : ಜನಸಾಮಾನ್ಯರಿಗೆ ಮನೆ ಬಾಗಿಲಿಗೆ ಸುಗಮ ಆಡಳಿತವನ್ನು ತಲುಪಿಸುವುದು ಹಾಗೂ ಸರ್ಕಾರದ ವಿವಿಧ ಜನಪರ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ತಕ್ಷಣವೇ ದೊರಕಿಸಿಕೊಡುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.ಸ್ಥಳೀಯ ತಾಲ್ಲೂಕು ಪಂಚಾಯತ್ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಆಡಳಿತದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಪ್ರಜಾಸೇವೆ ಆಂದೋಲನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿದ ಅವರು, ಸಭೆಯಲ್ಲಿ ಸ್ವೀಕರಿಸಲಾದ ವಿವಿಧ ಅರ್ಜಿಗಳನ್ನು ಪರೀಶೀಲಿಸಿ, ಯಾವುದೇ ವಿಳಂಬವಿಲ್ಲದೆ ಸ್ಥಳದಲ್ಲೇ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ತಹಶೀಲ್ದಾರ್ ಮಲ್ಲಿಕಾರ್ಜುನ ಹೆಗ್ಗನ್ನವರ ಮಾತನಾಡಿ, ಸರ್ಕಾರದ ಜನಪರ ಯೋಜನೆಗಳು ಮತ್ತು ಸೇವೆಗಳು ಸಾರ್ವಜನಿಕರಿಗೆ ಯಾವುದೇ ಅಡೆತಡೆಯಿಲ್ಲದೆ ಸುಲಭವಾಗಿ ಲಭ್ಯವಾಗುವಂತೆ ಮಾಡುವ ನಿಟ್ಟಿನಲ್ಲಿ ಆಡಳಿತ ಯಂತ್ರವು ಸದಾ ಕಾರ್ಯಪ್ರವತ್ತವಾಗಿದೆ ಎಂದು ತಿಳಿಸಿದರು.