ಜೆ ಇ ಇ ಮುಖ್ಯ ಪರೀಕ್ಷೆ ಅಭ್ಯರ್ಥಿಗಳಿಗೆ ಶುಭ ಸುದ್ದಿ
ನವದೆಹಲಿ, ಜುಲೈ 24: ಈ ಬಾರಿಯ ಜೆಇಇ ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆದ ಅಭ್ಯರ್ಥಿಗಳು ಎನ್‌ಐಟಿ ಮತ್ತು ಸಿಎಫ್ಟಿಐ ಪ್ರವೇಶ ಪಡೆಯಲು ೧೨ ನೇ ತರಗತಿಯಲ್ಲಿ ಕಡ್ಡಾಯವಾಗಿ ಶೇ .೭೫ ರಷ್ಟು ಅಂಕಗಳು ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರ ಪ್ರಕಟಿಸಿದೆ. ಕೊರೊನಾ ಸಾಂಕ್ರಾಮಿಕ ಹಿನ್ನಲೆಯಲ್ಲಿ ಈ ಕ್ರಮ ಜಾರಿಗೆ ಬರಲಿದೆ.
ಕೇಂದ್ರ ಮಾನವ ಸಂಪನ್ಮೂಲ ಸಚಿವ ರಮೇಶ್ ಪೋಖ್ರಿಯಲ್ ನಿಶಾಂಕ್ ಅವರು ಅರ್ಹತಾ ಅಭ್ಯರ್ಥಿಗಳು ೧೨ ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣ ಪ್ರಮಾಣಪತ್ರ ಹೊಂದಿದ್ದರೆ ಸಾಕು ಎಂದು ಪ್ರಕಟಿಸಿದ್ದಾರೆ.
ಈವರೆಗೆ ಜೆಇಇ ಮುಖ್ಯ ಪರೀಕ್ಷೆಯಲ್ಲಿ ಅರ್ಹತೆ ಪಡೆಯುವುದರ ಜತೆಗೆ ಎನ್‌ಐಟಿಗಳು ಮತ್ತು ಇತರ ಸಿಎಫ್ಟಿಐಗಳ ಪ್ರವೇಶ ಪಡೆಯಲು ೧೨ ನೇ ತರಗತಿ ಪರೀಕ್ಷೆಯಲ್ಲಿ ಕನಿಷ್ಠ ೭೫ ಶೇಕಡಾ ಅಂಕಗಳನ್ನು ಗಳಿಸುವುದು ಅಥವಾ ಅರ್ಹತಾ ಪರೀಕ್ಷೆಗಳಲ್ಲಿ ಅಗ್ರ ಶೇ ೨೦ ರಲ್ಲಿ ಸ್ಥಾನ ಪಡೆಯಬೇಕಾಗಿತ್ತು. ಆದರೆ, ಪ್ರಸಕ್ತ ಪರಿಸ್ಥಿತಿ ಹಿನ್ನಲೆಯಲ್ಲಿ ಅರ್ಹತಾ ಮಾನದಂಡ ಸಡಿಲಿಸಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವರು ಟ್ವೀಟ್ ನಲ್ಲಿ ತಿಳಿಸಿದ್ದಾರೆ.