ಜಾಗತಿಕ ಬೆಳವಣಿಗೆ ದರ ಶೇ 0.4 ರಷ್ಟು ಕುಸಿತ ಸಾಧ್ಯತೆ- ಏಷ್ಯಾ ಅಭಿವೃದ್ಧಿ ಬ್ಯಾಂಕ್
ನವದೆಹಲಿ, ಏಪ್ರಿಲ್ 17,ಕೊರೊನಾವೈರಸ್ ಸೋಂಕಿನಿಂದ ಜಾಗತಿಕವಾಗಿ 77 ಶತಕೋಟಿ ಡಾಲರ್ನಿಂದ 347 ಶತಕೋಟಿ ಡಾಲರ್ ಅಥವಾ ವಿಶ್ವ ಜಿಡಿಪಿಯ ಶೇ 0.1 ರಿಂದ 0.4 ರಷ್ಟು ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಏಷ್ಯಾ ಅಭಿವೃದ್ಧಿ ಬ್ಯಾಂಕ್ (ಎಡಿಬಿ)ನ ಅಧ್ಯಯನದ ವರದಿಯೊಂದು ತಿಳಿಸಿದೆ. .ಕೋವಿಡ್- 19 ಸೋಂಕಿನ ಕೇಂದ್ರಬಿಂದುವಾಗಿರುವ ಚೀನಾದ ಮೇಲೆ ಮೂರನೇ ಎರಡರಷ್ಟು ಪರಿಣಾಮ ಉಂಟಾಗಲಿದೆ ಎಂದು ಸಮೀಕ್ಷೆ ತಿಳಿಸಿದೆ.ಕೊರೊನವೈರಸ್ ಸೋಂಕು ಏಷ್ಯಾದ ಅಭಿವೃದ್ಧಿಶೀಲ ರಾಷ್ಟ್ರಗಳ ಮೇಲೆ ವಿವಿಧ ಆಯಾಮಗಳ ಮೂಲಕ ಗಮನಾರ್ಹ ಪರಿಣಾಮ ಬೀರಲಿದೆ. ಇದರಲ್ಲಿ ದೇಶೀಯ ಬೇಡಿಕೆಯ ತೀವ್ರ ಕುಸಿತ, ಪ್ರವಾಸೋದ್ಯಮ, ವಾಣಿಜ್ಯ-ವಹಿವಾಟು, ಉತ್ಪಾದನಾ ಸಂಪರ್ಕಗಳ ಕುಸಿತ, ಪೂರೈಕೆಗೆ ಅಡೆತಡೆಗಳು,ಆರೋಗ್ಯದ ಪರಿಣಾಮಗಳು ಸೇರಿವೆ ಎಂದು ಅಧ್ಯಯನ ತಿಳಿಸಿದೆ.ಸೋಂಕು ಉಲ್ಬಣಗೊಂಡ ಮೂರು ತಿಂಗಳ ನಂತರ ಮುನ್ನೆಚ್ಚರಿಕೆ ಕ್ರಮಗಳು ಮತ್ತು ಪ್ರಯಾಣ ನಿಷೇಧದಂತಹ ನಿರ್ಬಂಧಗಳು ಸಡಿಲಗೊಳ್ಳುತ್ತವೆ. ಜನವರಿಯ ಅಂತ್ಯದಲ್ಲಿ ಹೇರಲಾಗಿರುವ ನಿರ್ಬಂಧಗಳಿಂದ ಜಾಗತಿಕ ನಷ್ಟ 156 ಶತಕೋಟಿ ಡಾಲರ್ ಅಥವಾ ಜಾಗತಿಕ ಜಿಡಿಪಿಯ ಶೇ 0.2ರಷ್ಟು ತಲುಪಬಹುದು.ಚೀನಾಗೆ 103 ಶತಕೋಟಿ ಡಾಲರ್ ಅಥವಾ ಅದರ ಜಿಡಿಪಿಯ ಶೇ 0.8 ರಷ್ಟು ನಷ್ಟವಾಗಲಿದೆ. ಏಷ್ಯಾದ ಉಳಿದ ದೇಶಗಳಲ್ಲಿ 22 ಶತಕೋಟಿ ಡಾಲರ್ ಅಥವಾ ಜಿಡಿಪಿಯ ಶೇ 0.2ರಷ್ಟು ನಷ್ಟ ಅನುಭವಿಸುತ್ತವೆ ಎಂದು ಏಷ್ಯಾ ಅಭಿವೃದ್ಧಿ ಬ್ಯಾಂಕ್ ಗಮನ ಸೆಳೆದಿದೆ.