ಬೆಳಗಾವಿ

ಲಕ್ಷ್ಮಣ ಸವದಿಯವರಿಗೆ ಸಹಕಾರ ಖಾತೆಯನ್ನೇ ಕೊಡಿ: ನಿಂಬಾಳ ಆಗ್ರಹ

ಲಕ್ಷ್ಮಣ ಸವದಿಯವರಿಗೆ ಸಹಕಾರ ಖಾತೆಯನ್ನೇ ಕೊಡಿ: ನಿಂಬಾಳ ಆಗ್ರಹ


ಅಥಣಿ 10: ನೂತನ ಸಚಿವ ಲಕ್ಷ್ಮಣ ಸವದಿಯವರಿಗೆ ಸಹಕಾರ ಖಾತೆ ವಹಿಸಿ ಕೊಡಬೇಕು ಎಂದು ಖಿಳೇಗಾಂವ ಗ್ರಾಮದ ಲಕ್ಷ್ಮಣ ಸವದಿ ಅಭಿಮಾನಿ, ಉದ್ಯಮಿ ವಿಶಾಲ ನಿಂಬಾಳ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರರನ್ನು ಆಗ್ರಹಿಸಿದರು.  ಅವರು ಖಿಳೇಗಾಂವ ಗ್ರಾಮದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.

ಲಕ್ಷ್ಮಣ ಸವದಿಯವರು ಸಹಕಾರ ಇಲಾಖೆಯ ಮೂಲಕ ರಾಜಕೀಯ ಪ್ರವೇಶ ಮಾಡಿದ್ದ ಇವರು ಈ ಕ್ಷೇತ್ರದಲ್ಲಿ ರೈತರಿಗೆ ಅನಕೂಲವಾಗುವ ನಿಟ್ಟಿನಲ್ಲಿ ಸಾಕಷ್ಟು ಹೊಸ ಹೊಸ ನಿಯಮಗಳನ್ನು ಜಾರಿಗೊಳಿಸಿದ್ದಾರೆ ಅಲ್ಲದೆ ಇವರು ಈ ಹಿಂದೆ ಸಹಕಾರ ಸಚಿವರಾಗಿದ್ದಾಗ ಇಡೀ ದೇಶದಲ್ಲಿಯೇ ಶೂನ್ಯ ಬಡ್ಡಿ ದರದಲ್ಲಿ ರೈತರಿಗೆ ಸಾಲ ಮಂಜೂರು ಮಾಡುವ ಯೋಜನೆಯನ್ನು ಜಾರಿಗೊಳಿಸಿದ ಕೀರ್ತಿ ಕೂಡ ಲಕ್ಷ್ಮಣ ಸವದಿಯವರಿಗೆ ಸಲ್ಲುತ್ತದೆ ಎಂದರು ಮತ್ತು ಕೃಷಿ ಸಹಕಾರ ಸಂಘಗಳಿಗೆ ಸಾಲ ಮರುಪಾವತಿಸುವಾಗ ರೈತರಿಗೆ ಅನಕೂಲ ಕೂಡ ಮಾಡಿಕೊಡುತ್ತಾರೆ ಎಂದರು.  

ಲಕ್ಷ್ಮಣ ಸವದಿಯವರು ಮಂತ್ರಿಯಾಗಲಿ ಎಂದು ಲಕ್ಷ್ಮಣ ಸವದಿ ಅಭಿಮಾನಿ ಬಳಗದ ಪರವಾಗಿ ನಾನು ಖಿಳೇಗಾಂವ ಬಸವೇಶ್ವರ ದೇವಸ್ಥಾನದಲ್ಲಿ  ವಿಶೇಷ ಪೂಜೆ ಸಲ್ಲಿಸಿ ಭಕ್ತರಿಗೆ ಪ್ರಸಾದ ವ್ಯವಸ್ಥೆ ಕೂಡ ಮಾಡಲಾಗಿತ್ತು ಈಗ ನಮ್ಮ ಕೋರಿಕೆಯನ್ನು ಬಸವಣ್ಣ ಈಡೇರಿಸಿದ್ದು, ಇವರ ರಾಜಕೀಯ ಭವಿಷ್ಯ ಇನ್ನಷ್ಟು ಉಜ್ವಲವಾಗಲಿ ಎಂದು ಬಸವಣ್ಣ ದೇವರಲ್ಲಿ ಪ್ರಾರ್ಥಿಸುವೆ ಎಂದರು.  

ಲಕ್ಷ್ಮಣ ಸವದಿಯವರು ಸಚಿವರಾಗಿರುವುದು ಅಥಣಿ ಮತ್ತು ಕಾಗವಾಡ ಕ್ಷೇತ್ರಗಳ ಸಮಗ್ರ ಅಭಿವೃದ್ಧಿಗೆ ಪೂರಕವಾಗಿದೆ ಮತ್ತು ಕಾಗವಾಡ ಶಾಸಕ ರಾಜು ಕಾಗೆ ಯವರ ಬಲ ಕೂಡ ಹೆಚ್ಚಾಗಿದೆ ಎಂದ ಅವರು ಅಥಣಿ ಮತ್ತು ಕಾಗವಾಡ ಕ್ಷೇತ್ರಗಳಲ್ಲಿ ನೀರಾವರಿ, ಶಿಕ್ಷಣ, ವಿದ್ಯುತ್ ಸೇರಿದಂತೆ ಎಲ್ಲ ಕ್ಷೇತ್ರಗಳ ಅಭಿವೃದ್ಧಿಯ ಜೊತೆಗೆ ರಾಜ್ಯದ ಅಭಿವೃದ್ಧಿಗೂ ಮುಖ್ಯ ಮಂತ್ರಿಗಳೊಂದಿಗೆ ಕೈ ಜೋಡಿಸಲಿ ಎಂದು ಶುಭ ಹಾರೈಸಿದರು.  

ರೈತ ಮುಖಂಡರಾದ ಹೊನ್ನಪ್ಪ ಬಗಲಿ ಮತ್ತು ರಾಜು ನಾಗ್ಗೋಳ ಮಾತನಾಡಿ, ಸಚಿವ ಲಕ್ಷ್ಮಣ ಸವದಿಯವರು ನಮ್ಮ ಪಾಲಿಗೆ ಶಾಸಕರು, ಸಚಿವರು ಮತ್ತು ಮುಖ್ಯಮಂತ್ರಿಗಳೂ ಸಹ ಅವರೇ ಎಂದರು.  ಧುರೀಣರಾದ ಈಶ್ವರ ಅಳ್ಳಿಕಟ್ಟಿ, ರವಿ ಜಗಳಗಟ್ಟಿ, ಪ್ರವೀಣ ಹೊನ್ನಾಗೋಳ, ಸಂತೋಷ ದೇವನಗೋಳ, ಸಾಗರ ಅಳ್ಳಿಕಟ್ಟಿ, ಶಿವಾನಂದ ಧಡ್ಡಣ್ಣವರ, ಪ್ರಫುಲ್ ಪಾಟೀಲ, ರಾಹುಲ ಬಗಲಿ, ಸುಭಾಸ ಬಗಲಿ, ಹಣಮಂತ ಗುರುಪಾದಗೋಳ  ಸೇರಿದಂತೆ ಲಕ್ಷ್ಮಣ ಸವದಿ ಅಭಿಮಾನಿ ಬಳಗದ ಪದಾಧಿಕಾರಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ