ಬೆಳೆವಿಮೆ ಅರ್ಜಿ ಸಲ್ಲಿಸಲು ಇನ್ನೂ ಕಾಲಾವಕಾಶ ನೀಡಿ: ವರುಣಗೌಡ
ಶಿಗ್ಗಾವಿ 30: ಕೃಷಿ ಇಲಾಖೆಯ ಹೊಸ ನಿಯಮಗಳು ಪ್ರತಿವರ್ಷ ಜಾರಿಯಾಗುತಿದ್ದು ಹಲವು ರೈತರ ಎಫ್ ಐ ಡಿ ಇಲ್ಲದೆ ಬೆಳೆ ವಿಮೆ ಪಾವತಿಸಲು ಆಗಿಲ್ಲ ಅಧಿಕಾರಿಗಳು ಅರ್ಜಿ ಸಲ್ಲಿಸುವ ಅವಧಿ ವಿಸ್ತರಿಸಿ ರೈತರಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ರೈತಸೇನಾ ಕರ್ನಾಟಕ ಹಾವೇರಿ ಜಿಲ್ಲಾಧ್ಯಕ್ಷ ವರುಣಗೌಡ ಪಾಟೀಲ ಮನವಿ ಮಾಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹಾವೇರಿ ಜಿಲ್ಲೆಯಲ್ಲಿ ಅನೇಕ ಬಡ ರೈತ ಕುಟುಂಬಗಳು ಬಿತ್ತನೆಗಾಗಿ ಸಾಕಷ್ಟು ಸಾಲ ಸೂಲ ಮಾಡಿ ಬೆಳೆಗಳನ್ನು ಬೆಳೆದಿದ್ದಾರೆ ಆದರೆ ಕೃಷಿ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿಯಿಂದ ಹಲವು ರೈತರ ಹೊಲಗಳ ದಾಖಲೆ ಸರಿಯಿಲ್ಲದೆ ಫ್ರೂಟ್ಸ್ ಪೋರ್ಟ್ ನಲ್ಲಿ ಜಮೀನು ಸಮನಾಗಿ ಹಂಚಿಕೆ ಆಗದೆ, ಬೇರೆ ಬೇರೆ ಸಮಸ್ಯೆಗಳು ಇದ್ದು ಅವುಗಳನ್ನು ಸರಿಪಡಿಸಲು ಅಧಿಕಾರಿಗಳು ಇನ್ನಷ್ಟು ಅವಧಿ ಕಲ್ಪಿಸಿ ಕೊಡಬೇಕು, ಜೊತೆಗೆ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದ ಹೊಲದಲ್ಲಿ ಬೆಳೆದ ಬೆಳೆಗಳಿಗೆ ನೀರು ನುಗ್ಗಿ ಈಗಾಗಲೇ ಭಾಗಶ ಬೆಳೆಗಳು ಕೊಳೆಯುವ ಹಂತಕ್ಕೆ ತಲುಪಿವೆ ಅಂತಹ ರೈತರ ಬೆಳೆಗಳ ಸಮೀಕ್ಷೆ ಮಾಡಿ ಶೀಘ್ರ ಪರಿಹಾರ ನೀಡಬೇಕು ಎಂದರು.
ಸುಮಾರು ವಾರದಿಂದ ಮಳೆ ಸುರಿಯುತ್ತಿದ್ದರು ಸಚಿವರಾಗಲಿ ಸಂಬಂಧ ಪಟ್ಟ ಅಧಿಕಾರಿಗಳಾಗಲಿ ರೈತರ ಕಷ್ಟ ಕೇಳಲು ಬರದಿರುವುದು ಬೇಸರದ ಸಂಗತಿಯಾಗಿದೆ. ಹಾಗಾಗಿ ಈ ಬೆಳೆ ವಿಮೆ ಅವಧಿ ವಿಸ್ತರಿಸಿ ಹಾನಿಗೊಳಗಾದ ಬೆಳೆಗಳಿಗೆ ಶೀಘ್ರ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.