ಬಳ್ಳಾರಿ

ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿ

ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿ

  ಜಿಪಂ ಸಿಇಒ ಸಂಕನೂರು ಸೂಚನೆ: ವಿಶ್ವ ಪರಿಸರ ದಿನಾಚರಣೆ ಪೂರ್ವಭಾವಿ ಸಭೆ 

ಬಳ್ಳಾರಿ,ಜೂ.03: ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವ ಮೂಲಕ ಎಲ್ಲಾ ಇಲಾಖೆಯ ಅಧಿಕಾರಿಗಳು ಕೈಜೋಡಿಸಬೇಕು ಎಂದು ಜಿಲ್ಲಾ ಪಂಚಾಯತ್‌ನ ಮಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶರಣಪ್ಪ ಸಂಕನೂರು ಅವರು ಅಧಿಕಾರಿಗಳಿಗೆ ಸೂಚಿಸಿದರು. 

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಜಿಲ್ಲಾ ಪಂಚಾಯತ್‌ನ ನಜೀರ್‌ಸಾಬ್ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ದಿನಾಚರಣೆಗಳು ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು, ಬದಲಾಗಿ ಸ್ವಚ್ಛತೆಯು ನಮ್ಮ ಮನೆಯಿಂದಲೇ ಆರಂಭಗೊಳ್ಳಬೇಕು. ಈ ನಿಟ್ಟಿನಲ್ಲಿ ಸ್ವಚ್ಛತೆಯ ಕುರಿತು ಗ್ರಾಪಂ, ತಾಪಂ ಮಟ್ಟದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರಲ್ಲಿ ಅರಿವು ಮೂಡಿಸುವ ಕೆಲಸವಾಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. 

ಎಲ್ಲಾ ಸರ್ಕಾರಿ ಕಟ್ಟಡ, ಕಚೇರಿ, ಅಂಗನವಾಡಿ ಕೇಂದ್ರಗಳು ಮತ್ತು ಶಾಲೆಗಳಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಂಡು, ಎಲ್ಲಾ ಸರ್ಕಾರಿ ಕಟ್ಟಡಗಳ ಮೇಲೆ ಗಿಡ-ಗಂಟಿ, ನೀರು ನಿಲ್ಲದಂತೆ ಕ್ರಮವಹಿಸಬೇಕು ಎಂದು ತಿಳಿಸಿದರು. 

ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಹಸಿ ಕಸ ಮತ್ತು ಒಣ ಕಸವನ್ನು ವಿಂಗಡಿಸಬೇಕು. ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವಂತೆ ಜಾಗೃತಿ ಮೂಡಿಸಬೇಕು. ಗ್ರಾಮ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಮಟ್ಟದಲ್ಲಿ ಅಂಗನವಾಡಿ ಕೇಂದ್ರಗಳ ಮೂಲಕ ಕಡಿಮೆ ಪ್ಲಾಸ್ಟಿಕ್ ಆಂದೋಲನ ಕಾರ್ಯಕ್ರಮ ನಡೆಸಬೇಕು ಎಂದರು. 

ಮಳೆಗಾಲ ಸಂದರ್ಭದಲ್ಲಿ ಹಳ್ಳಿಗಳಲ್ಲಿ ಚರಂಡಿ, ರಸ್ತೆ ಗುಂಡಿಗಳಲ್ಲಿ ನೀರು ನಿಂತು ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಅವುಗಳಿಂದ ರಕ್ಷಿಸಿಕೊಳ್ಳಲು ವಿವಿಧ ಜಾಗೃತಿ ಕಾರ್ಯಕ್ರಮಗಳ ಮೂಲಕ ಆರೋಗ್ಯ ಇಲಾಖೆ ಸಿಬ್ಬಂದಿಗಳು ಜನರಲ್ಲಿ ಅರಿವು ಮೂಡಿಸಬೇಕು ಎಂದರು. 

ಜಿಲ್ಲೆಯ ಐದು ತಾಲೂಕುಗಳಲ್ಲಿ ಪ್ರತಿ ತಾಲೂಕುವಾರು 25 ಶಾಲೆಗಳನ್ನು ಗುರುತಿಸಿ, ವಿವಿಧ ಬಗೆ ಗಿಡಗಳನ್ನು ನೆಡಬೇಕು ಎಂದು ಸೂಚಿಸಿದರು. ಹಳ್ಳಿ-ಭಾಗಗಳಲ್ಲಿ ಕುಡಿಯುವ ನೀರಿನ ಮೂಲಗಳು ಹಾಗೂ ಅವುಗಳ ಸಂಪರ್ಕಗಳು ದುರಸ್ಥಿಗೊಂಡಾಗ ತಕ್ಷಣವೇ ಕ್ರಮ ವಹಿಸಬೇಕು. ದುರಸ್ತಿ ಹೊಂದಿದ ಚರಂಡಿಗಳನ್ನು ಸರಿಪಡಿಸಲು ಸೂಕ್ತ ನಿರ್ವಹಣೆ ಕ್ರಮ ಕೈಕೊಳ್ಳಬೇಕು. ಕುಡಿಯುವ ನೀರು ಯಾವುದೇ ಕಾರಣಕ್ಕೂ ಕಲುಷಿತಗೊಳ್ಳದಂತೆ ನೋಡಿಕೊಳ್ಳಬೇಕು. ನೀರು ಸದ್ಬಳಕೆ ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಸೂಚಿಸಿದರು.  

2023ರ ಪರಿಸರ ದಿನಾಚರಣೆಯನ್ನು ಅರ್ಥಗರ್ಭೀತವಾಗಿ ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗುವಂತೆ ಒಳ್ಳೆಯ ಪರಿಸರ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳು ಕ್ರಮಕೈಗೊಳ್ಳಬೇಕೆಂದು ತಿಳಿಸಿದರು. ಸಭೆಯಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. 

------ 

ಮಕ್ಕಳಲ್ಲಿನ ಕೌಶಲ್ಯ ಅನಾವರಣಕ್ಕೆ ಬೇಸಿಗೆ ಶಿಬಿರಗಳು ಅಗತ್ಯ: ರಾಮಕೃಷ್ಣ ನಾಯಕ 

ಬಳ್ಳಾರಿ,ಜೂ.04 : ಮಕ್ಕಳಿಗೆ ಪಠ್ಯೇತರ ಚಟುವಟಿಕೆ ಜೊತೆಗೆ ಕೌಶಲ್ಯ ತರಬೇತಿಗಳಾದ ಚಿತ್ರಕಲೆ, ಕರಕುಶಲ, ಯೋಗ ಕರಾಟೆ, ಸಮೂಹ ನೃತ್ಯ, ಸಮೂಹ ಸಂಗೀತ, ಜೇಡಿಮಣ್ಣಿನಕಲೆ, ಮುಂತಾದ  ಚಟುವಟಿಕೆಗಳ ಮುಖಾಂತರ ತಮ್ಮಲ್ಲಿರುವ ಪ್ರತಿಭೆ ಹೊರಹಾಕಲು ಬೇಸಿಗೆ ಶಿಬಿರವು ಸಹಕಾರಿಯಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ರಾಮಕೃಷ್ಣ ನಾಯಕ.ಎಮ್ ಹೇಳಿದರು. 

ಬೆಂಗಳೂರಿನ ರಾಜ್ಯ ಬಾಲಭವನ ಸೊಸೈಟಿ(ರಿ), ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಕನ್ನಡ ಮತ್ತು ಸಂಸ್ಕೃತ ಇಲಾಖೆ, ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಜಿಲ್ಲಾ ಬಾಲಭವನ ಸಮಿತಿ ಇವರ ಸಂಯುಕ್ತಾಶ್ರಯದಲ್ಲಿ ನಗರದ ಕಂಟೋನ್‌ಮೆಂಟ್‌ನ ಶಾಂತಿಧಾಮ ಆವರಣದಲ್ಲಿನ ಸರ್ಕಾರಿ ಬಾಲಕಿಯರ ಬಾಲಮಂದಿರದಲ್ಲಿ ಶುಕ್ರವಾರ ನಡೆದ 2023-24ನೇ ಸಾಲಿನ ಜಿಲ್ಲಾ ಮಟ್ಟದ “ಬೇಸಿಗೆ ಶಿಬಿರ” ಸಮಾರೋಪ ಸಮಾರಂಭ  ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

ಮಕ್ಕಳ ಸೃಜನಾತ್ಮಕತೆಗೆ ಸಹಕಾರಿಯಾಗಿ ಬೇಸಿಗೆ ಶಿಬಿರಗಳು ಉತ್ತಮ ವೇದಿಕೆಯಾಗಿದ್ದು, ಇಂತಹ ಶಿಬಿರಗಳನ್ನು ಏರಿ​‍್ಡಸಿ ಮಕ್ಕಳಿಗೆ ವಿವಿಧ ತರಬೇತಿಯನ್ನು ನೀಡುವುದರಿಂದ ಮಕ್ಕಳ ಭವಿಷ್ಯವು ರೂಪುಗೊಳ್ಳಲು ಸಹಾಯಕಾರಿಯಾಗುತ್ತದೆ ಎಂದರು. 

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಜಲಾಲಪ್ಪ ಎ.ಕೆ ಅವರು ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ದೈಹಿಕ ಹಾಗೂ ದೈಹಿಕೇತರ ಚಟುವಟಿಕೆಗಳನ್ನು ಪ್ರತಿದಿನ ಅಳವಡಿಸಿಕೊಂಡು ಉತ್ತಮ ಜೀವನ ನಿರ್ವಹಣೆ ರೂಢಿಸಿಕೊಳ್ಳುವುದರಿಂದ ಮುಂದಿನ ದಿನಗಳಲ್ಲಿ ಮಕ್ಕಳಿಗೆ ಅನೇಕ ರೀತಿಯ ಹೊಸ-ಹೊಸ ಚಟುವಟಿಕೆಗಳಿಗೆ ಮಾರ್ಗದರ್ಶನವಾಗುತ್ತದೆ ಎಂದು ಸಲಹೆ ನೀಡಿದರು. 

ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ವಿಜಯಲಕ್ಷ್ಮೀ ಮೈದೂರು ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಮಕ್ಕಳಿಗೆ ಬೇಸಿಗೆ ಶಿಬಿರದಲ್ಲಿ 15 ದಿನಗಳ ಕಾಲ ಪ್ರತಿದಿನ ಕರಾಟೆ, ಯೋಗ, ಚಿತ್ರಕಲೆ, ಕರಕುಶಲೆ, ಜೇಡಿ ಮಣ್ಣಿನ ಕಲೆ, ಸಮೂಹ ಸಂಗೀತಾ, ಸಮೂಹ ನೃತ್ಯಗಳನ್ನು ಹಾಗೂ ಇನ್ನೀತರೆ ಚಟುವಟಿಕೆಗಳನ್ನು ಮಕ್ಕಳಿಗೆ ತರಬೇತಿ ನೀಡಲಾಯಿತು. 

ಮಕ್ಕಳು ಉತ್ತಮ ರೀತಿಯಲ್ಲಿ ತರಬೇತಿ ಪಡೆದು, ಉತ್ಸಾಹದಿಂದ ಸಮಾರೋಪ ಸಮಾರಂಭದಲ್ಲಿ  ತರಬೇತಿ ಪಡೆದ ಚಟುವಟಿಕೆಗಳನ್ನು ಪ್ರದರ್ಶನ ಮಾಡುವುದರ ಮೂಲಕ ಮಕ್ಕಳು ಸಂತೋಷಪಟ್ಟರು ಎಂದು ತಿಳಿಸಿದರು. 

ಬೇಸಿಗೆ ಶಿಬಿರದ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಯೋಗ ಶಿಕ್ಷಕರಾದ ಜಗನ್ನಾಥ.ಕೆ, ಚಿತ್ರಕಲೆ ಮತ್ತು ಕರ-ಕುಶಲೆ ಶಿಕ್ಷಕರಾದ ನಾಗೇಶ್ ರಾವ್, ಸಮೂಹ ಸಂಗೀತ ಹಾಗೂ ನೃತ್ಯ ಶಿಕ್ಷಕರಾದ ಎರೇಗೌಡ, ಪೇಪರ್ ಕಟ್ಟಿಂಗ್ ಶಿಕ್ಷಕರಾದ ಕುಸುಮ, ಜನಪದ ಹಾಡು ಶಿಕ್ಷಕರಾದ ಹೆಚ್‌.ಎಂ.ಹಿರೇಮಠ ಅವರು ಉಪಸ್ಥಿತಿಯಲ್ಲಿದ್ದರು. 

ಕಾರ್ಯಕ್ರಮದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ನಾಗರಾಜ.ಪಿ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರಾದ ಮಂಜುನಾಥ, ಸರ್ಕಾರಿ ಬಾಲಕರ ಬಾಲಮಂದಿರ ಹಾಗೂ ಸರಕಾರಿ ಬಾಲಕಿಯರ ಬಾಲಮಂದಿರದ ಅಧೀಕ್ಷಕರಾದ ಗುರುಬಸವ,  ನಾಗಮ್ಮ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಗಂಗಾಧರ, ಶಾಲಾ ಪೂರ್ವ ಶಿಕ್ಷಣ ಬಲವರ್ಧನೆ ಕಾರ್ಯಕ್ರಮದ ಸಂಯೋಜಕ ಜಗನ್ನಾಥ.ಕೆ, ಜಿಲ್ಲಾ ಬಾಲ ಭವನ ಕಚೇರಿಯ ಸಹಾಯಕ ಮಲ್ಲಿಕಾರ್ಜುನ ಸೇರಿದಂತೆ ಮಕ್ಕಳ ಜಾಗೃತಿ ಸಂಸ್ಥೆಯ ಸಿಬ್ಬಂದಿಗಳು, ಸರ್ಕಾರಿ ಬಾಲಕರ/ಬಾಲಕಿಯರ ಸಿಬ್ಬಂದಿಗಳು, ವಿವಿಧ ಶಾಲಾ ಮಕ್ಕಳು, ಪಾಲಕರು ಹಾಗೂ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು. 


ಸುದ್ದಿ ಓದಿ