ರೈತನ ಹೊಲದಲ್ಲಿ ಅಡಗಿ ಕುಳಿತಿದ್ದ ದೈತ್ಯ ಹೆಬ್ಬಾವು ರಕ್ಷಣೆ; ಗ್ರಾಮಸ್ಥರಲ್ಲಿ ಕೆಲಕಾಲ ಆತಂಕ
ಲೋಕದರ್ಶನ ವರದಿ
ಮುಂಡಗೋಡ 29 : ತಾಲೂಕಿನ ಸನವಳ್ಳಿ ಗ್ರಾಮದ ಬಸಪ್ಪ ಕಳಸಗೇರಿ ಅವರ ಹೊಲದಲ್ಲಿ ಭಾರೀ ಗಾತ್ರದ ಸುಮಾರು 10 ಅಡಿ ಉದ್ದದ ಹೆಬ್ಬಾವು ಪತ್ತೆಯಾಗಿದ್ದು, ಕೆಲಕಾಲ ಗ್ರಾಮಸ್ಥರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಗೋವಿನ ಜೋಳದ ರವದಿಯಲ್ಲಿ ಅಡಗಿ ಕುಳಿತಿದ್ದ ಹೆಬ್ಬಾವನ್ನು ಗಮನಿಸಿದ ರೈತರು ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಹಳ್ಳಿ ಗಸ್ತು ಅರಣ್ಯ ಪಾಲಕರಾದ ಮುತ್ತುರಾಜ ಅವರು ಸ್ಥಳಕ್ಕೆ ಧಾವಿಸಿ, ಸಾಹಸಮಯ ಕಾರ್ಯಾಚರಣೆ ನಡೆಸಿ ಹೆಬ್ಬಾವನ್ನು ಸುರಕ್ಷಿತವಾಗಿ ರಕ್ಷಿಸಿದರು. ಬಳಿಕ ಹಾವನ್ನು ಅದರ ಸ್ವಾಭಾವಿಕ ಆವಾಸಸ್ಥಾನಕ್ಕೆ ಬಿಡಲಾಯಿತು. ಕಾರ್ಯಾಚರಣೆಯಲ್ಲಿ ಪರಿಸರ ಪ್ರೇಮಿ ನಾಗರಾಜ ಗುಬ್ಬಕ್ಕನವರ, ಮಂಜು ಕೋಣನಕೇರಿ, ಮಾರುತಿ ಕಳಸಗೇರಿ, ಮಾರುತಿ ಕೋಣನಕೇರಿ, ನಿಶಿಮೇಶ್ವರ ಯಲವಟ್ಟಿ, ಕೃಷ್ಣ ದೊಡ್ಡಮನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.