ರೋಗ ನಿರೋಧ ಶಕ್ತಿ ಹೆಚ್ಚಿಸಲು ಲಸಿಕೆ ಪಡೆಯುವುದು ಅಗತ್ಯ: ಅರುಣಕುಮಾರ
ರಾಣೇಬೆನ್ನೂರ 03: ಕಳೆದ 2 ವರ್ಷಗಳ ಅವಧಿಯಲ್ಲಿ ಕರೋನಾದ ಒಂದು ಮತ್ತು ಎರಡನೇ ಅಲೆಯಿಂದ ಸಾಕಷ್ಟು ಸಾವು ನೋವುಗಳನ್ನು ಸಾರ್ವಜನಿಕರು ಅನುಭವಿಸಿದ್ದು, ಇದೀಗ ಮೂರನೇ ಅಲೆಯ ಆತಂಕದಲ್ಲಿ ಇದ್ದೇವೆ. ಯಾರೂ ಸಹ ಕರೋನಾ ಮತ್ತು ಒಮಿಕ್ರಾನ್ದಿಂದ ಭಯ ಪಡುವುದನ್ನು ಬಿಟ್ಟು ಮಕ್ಕಳು ಸೇರಿದಂತೆ ಎಲ್ಲಾ ವಯೋಮಾನದವರು ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳುವುದರ ಮೂಲಕ ಈ ಕ್ಷೇತ್ರವನ್ನು ಕರೋನಾ ಮುಕ್ತವನ್ನಾಗಿ ಮಾಡಲು ಸಮರೋಪಾಧಿಯಲ್ಲಿ ಸರ್ವರೂ ಶ್ರಮಿಸಬೇಕಾಗಿದೆ ಎಂದು ಶಾಸಕ ಅರುಣಕುಮಾರ ಪೂಜಾರ ಹೇಳಿದರು.
ಅವರು ಸೋಮವಾರ ಇಲ್ಲಿನ ಕೆಎಲ್ಇ ಶಿಕ್ಷಣ ಸಂಸ್ಥೆಯ ರಾಜರಾಜೇಶ್ವರಿ ಹೆಣ್ಣು ಮಕ್ಕಳ ಶಾಲೆಯಲ್ಲಿ 15 ರಿಂದ 18 ವಯಸ್ಸಿನ ಮಕ್ಕಳಿಗೆ ಏರಿ್ಡಸಿದ್ದ ಲಸಿಕಾ ವಿತರಣೆ ಅಭಿಯಾನ ಉದ್ಘಾಟಿಸಿ ಮಾತನಾಡಿದರು. ಕರೋನಾ ಮತ್ತು ಒಮಿಕ್ರಾನ್ ಮಟ್ಟ ಹಾಕಲು ಲಸಿಕೆ ಒಂದೇ ಸಂಜೀವಿನಿಯಾಗಿದೆ. ಯಾವ ಮಕ್ಕಳೂ ಸಹ ಅಂಜದೇ ಲಸಿಕೆ ಹಾಕಿಸಿಕೊಳ್ಳಬೇಕು. ಜೊತೆಗೆ ಮನೆಯಲ್ಲಿರುವ ತಂದೆ-ತಾಯಿ, ಅಣ್ಣ-ತಮ್ಮ, ಅಕ್ಕ-ತಂಗಿ ಸೇರಿದಂತೆ ಇತರರಿಗೂ ಸಹ ಲಸಿಕೆ ಹಾಕಿಸಿಕೊಳ್ಳಲು ಪ್ರೇರೆಪಿಸಲು ಮಕ್ಕಳು ಮುಂದಾಗಿ ತಮ್ಮ ಮಾನವೀಯ ಸೇವಾ ಕಾರ್ಯ ಮೆರೆಯಲು ಮುಂದಾಗಬೇಕು ಎಂದರು.
ತಾಲೂಕಿನಲ್ಲಿ 15 ರಿಂದ 18 ವರ್ಷದ 12,128 ಮಕ್ಕಳಿಗೆ ಲಸಿಕೆ ಹಾಕಿಸುವ ಗುರಿ ಹೊಂದಲಾಗಿದ್ದು, ಈಗಾಗಲೇ 30 ವರ್ಷ ಮೇಲ್ಪಟ್ಟ 2.26 ಲಕ್ಷ ಜನರು ಪ್ರಥಮ ಮತ್ತು 1.78 ಲಕ್ಷ ಜನರು 2ನೇ ಲಸಿಕೆಯನ್ನು ಹಾಕಿಸಿಕೊಂಡಿದ್ದಾರೆ. ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುವ ಜನರು ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಂಡು ಕರೋನಾದಿಂದ ಮುಕ್ತರಾಗಲು ಮುಂದಾಗಬೇಕು ಎಂದು ಪೂಜಾರ ಅವರು ಕರೆ ನೀಡಿದರು.
ಸಂಸ್ಥೆಯ ಅಧ್ಯಕ್ಷ ವಿ.ಪಿ.ಲಿಂಗನಗೌಡ್ರ, ನಗರಸಭೆ ಅಧ್ಯಕ್ಷೆ ರೂಪಾ ಚಿನ್ನಕಟ್ಟಿ, ಉಪಾಧ್ಯಕ್ಷೆ ಕಸ್ತೂರಿ ಚಿಕ್ಕಬಿದರಿ, ಪೌರಾಯುಕ್ತ ಬಿ.ಟಿ.ಉದಯಕುಮಾರ, ತಹಶೀಲ್ದಾರ ಶಂಕರ್.ಜಿ.ಎಸ್, ಪ್ರಾಧಿಕಾರದ ಅಧ್ಯಕ್ಷ ಚೋಳಪ್ಪ ಕಸವಾಳ, ಬಿಇಓಂ ಎನ್.ಜೆ.ಗುರುಪ್ರಸಾದ, ತಾಲೂಕಾ ಆರೋಗ್ಯಾಧಿಕಾರಿ ಡಾ.ಸಂತೋಷಕುಮಾರ ಜಿ, ತೋಟಗಾರಿಕೆ ನಿರ್ದೇಶಕಿ, ವಿಜಯಲಕ್ಷ್ಮಿ, ಸಿಡಿಪಿಓ ಜಯಶ್ರೀ ಪಾಟೀಲ, ಬಸವರಾಜ ಹುಲ್ಲತ್ತಿ, ಎ.ಬಿ.ಚಂದ್ರಶೇಖರ, ಲಿಂಗರಾಜ ಸುತ್ತಕೋಟಿ, ಬಿ.ಎಸ್.ಪಟ್ಟಣಶೆಟ್ಟಿ, ವೀರಣ್ಣ ಅಂಗಡಿ, ಶಿವರಾಜ ಶೀಮಿಕೇರಿ, ಸಿದ್ದಣ್ಣ ಚಿಕ್ಕಬಿದರಿ ಸೇರಿದಂತೆ ಮತ್ತಿತರ ಗಣ್ಯರು, ವೈದ್ಯರು ಉಪಸ್ಥಿತರಿದ್ದರು.