ಸಮಾಜ ಸಂಘಟನೆಯಲ್ಲಿ ನಮ್ಮ ಹಕ್ಕನ್ನು ಪಡೆದುಕೊಳ್ಳಲು ಮುಂದಾಗಿ: ಮಂಜುನಾಥ ಬೋವಿ
ರಾಣಿಬೆನ್ನೂರ 13: ರಾಜ್ಯದ ಪ್ರತಿಯೊಂದು ಸಮಾಜದ ಮುಖಂಡರು ಸಮಾಜ ಸಂಘಟನೆ ಮಾಡುವ ಮೂಲಕ ತಮ್ಮ ಹಕ್ಕನ್ನು ಪಡೆಯಲು ಮುಂದಾಗುತ್ತಿದ್ದು. ನಾವು ಕೂಡಾ ಸಮಾಜ ಸಂಘಟನೆಯಲ್ಲಿ ಪ್ರಭಲರಾಗಿ ನಮ್ಮ ಹಕ್ಕನ್ನು ಪಡೆದುಕೊಳ್ಳಲು ಮುಂದಾಗುವುದು ಅನಿವಾರ್ಯ ಎಂದು ಜಿಲ್ಲಾ ಗಂಗಾಮತ ಸಮಾಜದ ಅಧ್ಯಕ್ಷ ಮಂಜುನಾಥ ಬೋವಿ ಕರೆ ನೀಡಿದರು.
ಗುರುವಾರ ತಾಲೂಕಿನ ತುಮ್ಮಿನಕಟ್ಟಿ ಗ್ರಾಮದ ಶ್ರೀ ಗಂಗಾಪರಮೇಶ್ವರಿ ದೇವಸ್ಥಾನದಲ್ಲಿ ಗಂಗಾಮತ ಸಮಾಜದ ಯುವಪಡೆ ಸಂಘಟನೆ ಕುರಿತು ಪೂರ್ವಭಾವಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಗಂಗಾಮತ ಸಮಾಜದ ಜನಸಂಖ್ಯೆ 60 ಲಕ್ಷಕ್ಕೂ ಅಧಿಕವಿದ್ದು, ಸಮಾಜ ಆರ್ಥಿಕ, ಶೈಕ್ಷಣಿಕ, ಸಮಾಜಿಕ, ರಾಜಕೀಯವಾಗಿ ಬಹಳಷ್ಟು ಹಿಂದುಳಿದಿದ್ದು. ಪ್ರಸ್ತುತ ಸಚಿವ ಸಂಪುಟದಲ್ಲಿ ಸಮಾಜದ ಸಚಿವರಿಲ್ಲದ್ದು ಬಹಳಷ್ಟು ನೋವುಂಟಾಗಿದೆ. ಇಷ್ಟೊಂದು ಜನಸಂಖ್ಯೆ ಇರುವ ಸಮಾಜಕ್ಕೆ ರಾಜಕೀಯ ಸ್ಥಾನ ಮಾನ ಸಿಗುವವರೆಗ ನಾವು ಸಂಘಟಕರಾಗಿ ನಮ್ಮ ಹಕ್ಕಿಗೆ ಹೋರಾಡುವುದು ಅನಿವಾರ್ಯವಾಗಿದೆ ಎಂದರು.
ಭಾರತೀಯ ಮೂಲ ನಿವಾಸಿಗಳಾಗಿರುವ ಗಂಗಾಮತ ಸಮಾಜ ಆರ್ಥಿಕ, ಶೈಕ್ಷಣಿಕ, ಸಮಾಜಿಕ, ರಾಜಕೀಯವಾಗಿ ಬಹಳಷ್ಟು ಹಿಂದುಳಿದಿದ್ದು, ಸರ್ಕಾರ ನಮಗೆ ಎಸ್ಟಿ ಮೀಸಲಾತಿ ನೀಡಬೇಕು. ರಾಜ್ಯಾದ್ಯಂತ ಸಂಘಟಕರಾಗಿ ನಮ್ಮ ಧ್ವನಿಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ತಲುಪಿಸಬೇಕಿದೆ. ಅಲ್ಲಿಯವರೆಗೆ ಯಾವ ಯುವಕರೂ ನಿದ್ದೆ ಮಾಡಬಾರದು ಎಂದು ಯುವಕರಲ್ಲಿ ಮನವಿ ಮಾಡಿದರು.
ವಾಲ್ಮಿಕಿ ಸಮಾಜಕ್ಕಿಂತ ಮೊದಲೇ ನಮಗೆ ಎಸ್ಟಿ ಮೀಸಲಾತಿ ದೊರೆಯಬೇಕಿತ್ತು. ನಮ್ಮ ಸಂಘಟನೆಯ ಕೊರೆತಿಯಿಂದ ವಂಚಿತರಾಗಿದ್ದೇವೆ. ಈಗಲೂ ಕಾಲ ಮಿಂಚಿಲ್ಲ ನಾವು ಅನುಭವಿಸಿದ ನೋವು ನಲಿವುಗಳನ್ನು ನಮ್ಮ ಮುಂದಿನ ಪೀಳಿಗೆ ಅನುಭವಿಸಬಾರದು. ಸಮಾಜದ ಪ್ರತಿಯೊಂದು ಮನೆಯಲ್ಲಿ ಒಬ್ಬ ಯುವಕ ಸಮಾಜದ ಅಭಿವೃದ್ಧಿಗೆ ಕಂಕಣ ಬದ್ಧರಾಗೋಣ ಎಂದು ಕರೆ ನೀಡಿದರು.
ಸಮಾಜದ ಮುಖಂಡರಾದ ಫಕ್ಕೀರ್ಪ ತುಮ್ಮಿನಕಟ್ಟಿ, ರಾಜು ರಟ್ಟಿಹಳ್ಳಿ, ನ್ಯಾಯವಾದಿ ಹೊನ್ನಪ್ಪ ತಿಮ್ಮೇನಹಳ್ಳಿ, ಹಾಲೇಶ ಜಾಡರ, ಕೊಟ್ರೇಶ ಕುದರಿಹಾಳ, ರವೀಂದ್ರ ಅಂಬಿಗೇರ, ಬಸವರಾಜ ಹಳ್ಳೇರ, ಕರಬಸಪ್ಪ ಬಾರ್ಕಿ, ಸುರೇಶ ಕೂಲಂಬಿ, ಹನುಮಂತಪ್ಪ ಬಣಗಾರ, ಮಾರುತಿ ಬಣಗಾರ, ಸುರೇಶ ಯಾತಗೇರಿ, ನಾಗರಾಜ ಬಣಗಾರ, ದರ್ಶನ ಓಲೇಕಾರ, ರಂಗನಾಥ ಬಣಗಾರ, ಭರತ ಸತ್ಯಪ್ಪನವರ, ನಂದೀಶ ಬಣಗಾರ, ಲಕ್ಷ್ಮಿ ದಂಡಗಿಹಳ್ಳಿ, ಹಾಲೇಶ ಬಣಗಾರ ಹಾಗೂ ಸಮಾಜದ ಮುಖಂಡರು ಇದ್ದರು.