ತಾಲೂಕಾ ಅಧಿಕಾರಿಗಳ ಸಾಮಾನ್ಯ ಸಭೆ; ರೈತರಿಗೆ ಬೀಜ, ಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಿ: ಬಸವರಾಜ ಅಡವಿಮಠ
ಲೋಕದರ್ಶನ ವರದಿ
ಕಾಗವಾಡ 04: ತಾಲೂಕಿನ ಯಾವುದೇ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ನೋಡಿಕೊಂಡು, ಅವಶ್ಯಕತೆ ಇದ್ದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲು ಎಲ್ಲ ಪಿಡಿಓಗಳಿಗೆ ಸೂಚನೆ ನೀಡಲಾಗಿದೆ.
ಜೊತೆಗೆ ರೈತರಿಗೆ ಬಿತ್ತನೆ ಬೀಜ, ಗೊಬ್ಬರ ಕೊರತೆಯಾಗದಂತೆ ಕ್ರಮ ಕೈಗೊಳ್ಳುವಂತೆ ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಬೆಳಗಾವಿ ಜಿಲ್ಲಾ ಪಂಚಾಯತ ಆಡಳಿತಾಧಿಕಾರಿ ಹಾಗೂ ಉಪ ಕಾರ್ಯದರ್ಶಿ (ಅಭಿವೃದ್ಧಿ) ಬಸವರಾಜ ಅಡವಿಮಠ ತಿಳಿಸಿದ್ದಾರೆ.
ಅವರು, ಗುರುವಾರ ದಿ. 04 ರಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ತಾಲೂಕಿನ ಎಲ್ಲ ಅಧಿಕಾರಿಗಳ ಸಾಮಾನ್ಯ ಸಭೆಯಲ್ಲಿ ಮಾತನಾಡುತ್ತಿದ್ದರು. ಎಲ್ಲ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಯಲ್ಲಿಯ ಮಾಡಬೇಕಾಗಿರುವ ಕಾರ್ಯಗಳ ಪಟ್ಟಿ ಮಾಡಿ, ಆಧ್ಯತೆಯ ಮೇರೆಗೆ ಅವುಗಳನ್ನು ಕಾರ್ಯರೂಪಕ್ಕೆ ತರಲು ಸೂಚಿಸಲಾಗಿದೆ ಎಂದರು.
ಈಗಷ್ಟೆ ಶೈಕ್ಷಣಿಕ ವರ್ಷ ಪ್ರಾರಂಭಗೊಂಡಿದ್ದು, ಶಾಲಾ ಕಟ್ಟಡಗಳ ರೀಪೇರಿ ಮತ್ತು ನೂತನ ಶೌಚಾಲಗಳ ನಿರ್ಮಾಣ ಮತ್ತು ರೀಪೇರಿ ಕಾರ್ಯಗಳನ್ನು ಮಾಡಿಕೊಳ್ಳಬೇಕು. ಮತ್ತು ತಾಲೂಕಿನ ಯಾವೊಬ್ಬ ಮಗು ಕೂಡಾ ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಂಡು, ನೂತನ ಮಕ್ಕಳ ನೊಂದಣಿ ಮಾಡಿಕೊಳ್ಳಬೇಕೆಂದು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ವೇಳೆ ತಾ.ಪಂ. ಇಓ ವೀರಣ್ಣಾ ವಾಲಿ, ಎಡಿ ಅಲ್ಲಾವುದ್ಧಿನ ಅನ್ಸಾರಿ, ಎಸ್.ಎಸ್. ಸನ್ನಾಳ, ಬಿಸಿಎಂನ ವೆಂಕಟೇಶ ಕುಲಕರ್ಣಿ, ಕುಡಿಯುವ ನೀರು ಸರಬುರಾಜು ಇಲಾಖೆಯ ರವೀಂದ್ರ ಮುರಗಾಲಿ, ಸಮಾಜ ಕಲ್ಯಾಣ ಇಲಾಖೆಯ ಪರಶುರಾಮ ಪತ್ತಾರ, ಬಿಇಓ ಪಾಂಡುರಂಗ ಮದಭಾವಿ, ಅರಣ್ಯ ಇಲಾಖೆಯ ರಾಕೇಶ ಅರ್ಜುನವಾಡ, ತೋಟಗಾರಿಕೆ ಇಲಾಖೆಯ ರೂಪಾ ಹಳ್ಳೂರ, ಕೃಷಿ ಇಲಾಖೆಯ ನಿಂಗಣ್ಣಾ ಬಿರಾದರ, ಸಿಡಿಪಿಓ ಮೇಲ್ವಿಚಾರಕಿ ಸುಜಾತಾ ಪಾಟೀಲ ಸೇರಿದಂತೆ ಎಲ್ಲ ಇಲಾಖೆಯ ಅಧಿಕಾರಿಗಳು, ಪಿಡಿಓಗಳು ಉಪಸ್ಥಿತರಿದ್ದರು.