ಬೈಲಹೊಂಗಲ

21ರಂದು ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗಾಗಿ ಮಹಾಸಮಾವೇಶ

21ರಂದು ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗಾಗಿ  ಮಹಾಸಮಾವೇಶ
ಬೈಲಹೊಂಗಲ ಪಟ್ಟಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪಂಚಮಸಾಲಿ ಮುಖಂಡರು ಪಾಲ್ಗೊಂಡಿದ್ದರು.

ಬೈಲಹೊಂಗಲ 16:  ಶೈಕ್ಷಣಿಕ ಹಾಗೂ ಸರ್ಕಾರದ ಉದ್ಯೋಗದ ನೇಮಕಾತಿಯಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗಾಗಿ  ಬೆಂಗಳೂರು ಅರಮನೆ ಮೈದಾನದಲ್ಲಿ ಫೆ. 21 ರಂದು ಮು 11ಘಂಟೆಗೆ ನಡೆಯುವ ಪಂಚಮಸಾಲಿ ಮಹಾ ಸಮಾವೇಶಕ್ಕೆ ಪ್ರತಿಯೊಬ್ಬ ಪಂಚಮಸಾಲಿ ಪಾಲ್ಗೊಳ್ಳಬೇಕೆಂದು ತಾಲೂಕಾ ಅಧ್ಯಕ್ಷ ಶ್ರೀಶೈಲ ಬೋಳಣ್ಣವರ ಹೇಳಿದರು. 

ಅವರು ಬುಧವಾರ ಪಟ್ಟಣದ ಅತಿಥಿ ಗೃಹದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಕಳೆದ 3 ದಶಕಗಳಿಂದ  ಆರ್ಥಿಕವಾಗಿ ಶೈಕ್ಷಣಿಕವಾಗಿ ಹಿಂದೂಳಿದ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಸರ್ಕಾರದ ಉದ್ಯೋಗದಲ್ಲಿ 2ಎ ಮೀಸಲಾತಿ ಕಲ್ಪಿಸಿಕೊಡಬೇಕೆಂದು ದಿ. ಕಾಶಪ್ಪನವರು ಹಾಗೂ ಪಿ.ಸಿ ಸಿದ್ದನಗೌಡರ ನೇತೃತ್ವದಲ್ಲಿ ಹುಟ್ಟಿಕೊಂಡ ಈ ಹೋರಾಟ ಇಂದು ಮಾಡು ಇಲ್ಲವೆ ಮಡಿ ಮಟ್ಟಕ್ಕೆ ಬಂದು ನಿಂತಿದೆ. ಈ ನಿರ್ಣಾಯಕ ಸಭೆಗೆ ಸುಮಾರು ಹತ್ತು ಲಕ್ಷಕ್ಕಿಂತ ಹೆಚ್ಚು ಜನರು ಸೇರಲಿದ್ದು  ಬೈಲಹೊಂಗಲ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಪ್ರತಿ ಮನೆಯಿಂದ ಒಬ್ಬರು ಪಂಚಮಸಾಲಿಗಳು ಸೇರಿ ಸುಮಾರು 10 ಸಾವಿರ ಜನ ಹೋರಾಟಕ್ಕೆ ಪಾಲ್ಗೊಳ್ಳಬೇಕು. ಸಮಾಜದ ಮುಂದಿನ ಪೀಳಿಗೆ ಮೀಸಲಾತಿ ವಂಚಿತರಾದರೆ  ಪಂಚಮಸಾಲಿಗಳ ಸ್ಥಿತಿ ಮತ್ತಷ್ಟು ಪಾತಾಳಕ್ಕೆ ಕುಸಿಯಲಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಮಾಜಿ ಪುರಸಭೆ ಅಧ್ಯಕ್ಷ ರಾಜಶೇಖರ ಮೂಗಿ, ತಾಲೂಕಾ ಪ್ರಧಾನ ಕಾರ್ಯದರ್ಶಿ ಮಹೇಶ ಹರಕುಣಿ, ಪಂಚಮಸಾಲಿ 2ಎ ಮೀಸಲಾತಿ ಹಕ್ಕೊತ್ತಾಯ ಸಮೀತಿಯ ರಾಜ್ಯಾಧ್ಯಕ್ಷ ಎಫ್.ಎಸ್.ಸಿದ್ದನಗೌಡರ ಮತ್ತು ತಾಲೂಕಕೊಶಾಧ್ಯಕ್ಷ ಮುರಗೇಶ ಗುಂಡ್ಲೂರ ಮಾತನಾಡಿ, ಸಮಾಜದ ನ್ಯಾಯಯುತ ಬೇಡಿಕೆಗೆ ಸರ್ಕಾರ ತಕ್ಷಣ ಸ್ಪಂದಿಸಿ ಮೀಸಲಾತಿ ನೀಡಬೇಕು. ಈ ವಿಷ ಯದಲ್ಲಿ ಪಕ್ಷಾತೀತವಾಗಿ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು. ಮಕರ ಸಂಕ್ರಮನದಂದು ಲಿಂಗಾಯತ ಧಾರ್ಮಿಕ ಪೀಠ ಕೂಡಲಸಂಗಮದಿಂದ 2ಎ ಮೀಸಲಾತಿಗಾಗಿ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಪ್ರಥಮ ಜಗದ್ಗುರು ಬಸವಜಯ ಮೃತುಂಜಯ ಸ್ವಾಮೀಜಿ ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿಯ ನೇತೃತ್ವದಲ್ಲಿ ಪ್ರಾರಂಭವಾದ ಪಾದಯಾತ್ರೆ ಸುಮಾರು 700 ಕೀ.ಮೀ  ಶಾಂತ ರೀತಿಯಿಂದ ಕ್ರಮಿಸಿ ಆಡಳಿತ ಪೀಠ ವಿಧಾನಸೌಧಕ್ಕೆ ಮುಟ್ಟಲಿದೆ. ಬೆಂಗಳೂರು ಅರಮನೆ ಮೈದಾನದಲ್ಲಿ ಫೇ 21ರಂದು ಹಮ್ಮಿಕೊಂಡ  ಸಮಾವೇಶದೊಳಗೆ ಪಂಚಮಸಾಲಿ ಸಮಾಜಕ್ಕೆ  ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪನವರು ತಮ್ಮ ಪರಮಾಧಿಕಾರ ಬಳಸಿಕೊಂಡು ಸಂವಿಧಾನದ ಅನುಚ್ಛೇದ 15 (4) ರ ಪ್ರಕಾರ ಶೈಕ್ಷಣಿಕ ಮಿಸಲಾತಿ ಹಾಗೂ 16(4) ಪ್ರಕಾರ ಸರ್ಕಾರದ ಉದ್ಯೋಗದಲ್ಲಿ ಮೀಸಲಾತಿ ನೀಡುವ ಅಧಿಕಾರವಿದ್ದು  ಯಾವುದೆ ವರದಿಗಾಗಿ ವಿಳಂಬಮಾಡದೆ ಸಮಾಜದ ನ್ಯಾಯಯುತ ಹಕ್ಕೊತ್ತಾಯ 2ಎ ಮೀಸಲಾತಿ ನೀಡಿ, ಕೇಂದ್ರದ ಓಬಿಸಿ ಮೀಸಲಾತಿ ವಂಚಿತ ಲಿಂಗಾಯತ ಧರ್ಮದ ಎಲ್ಲ ಒಳಪಂಗಡಗಳನ್ನು ಕೇಂದ್ರದ ಓಬಿಸಿ ಪಟ್ಟಿಗೆ ಸೇರಿಸಲು ಸಚಿವ ಸಂಪುಟದಲ್ಲಿ ಶಿಪಾರಸ್ಸು ಮಾಡಬೇಕೆಂದು ಒಂದು ಕೋಟಿಗೆ ಸಮೀಪವಿರುವ ಸಮಸ್ತ ಲಿಂಗಾಯತ ಪಂಚಮಸಾಲಿ ಸಮಾಜದ ಪರವಾಗಿ ವಿಂನತಿಸುತ್ತೆವೆ. ಮಾನ್ಯ ಮುಖ್ಯಮಂತ್ರಿಗಳು ಆರ್ಥಿಕ ದುರ್ಬಲ, ಕೃಷಿ ಕುಲಿಕಾರ್ಮಿಕರು ಹಾಗೂ ಕೃಷಿಯನ್ನೆ ನಂಬಿ ನಡೆಯುವ ಈ ಸಮಾಜಕ್ಕೆ ನ್ಯಾಯ ಒದಗಿಸಿ ಪಾದಯಾತ್ರೆ ಹಾಗೂ ಮುಂದೆ ನಡೆಯಲಿರುವ ಪ್ರತಿಭಟನೆಗೆ ಇತಿಶ್ರೀ ಹಾಕಬೇಕೆಂದರು.

ಪತ್ರಿಕಾಗೋಷ್ಠಿಯಲ್ಲಿ ಸಮಾಜದ  ತಾಲೂಕ ಅಧ್ಯಕ್ಷ ಶ್ರೀಶೈಲ ಬೋಳಣ್ಣವರ, ಪಂಚಮಸಾಲಿ ಮೀಸಲಾತಿ ಹಕ್ಕೊತ್ತಾಯ ಸಮೀತಿಯ ರಾಜ್ಯಾಧ್ಯಕ್ಷರು ಎಫ್.ಎಸ್.ಸಿದ್ದನಗೌಡರ, ಪ್ರಧಾನಕಾರ್ಯದರ್ಶಿ ಮಹೇಶ ಹರಕುಣಿ, ಕೋಶಾಧ್ಯಕ್ಷ ಮುರಗೇಶ ಗುಂಡ್ಲೂರ, ಮಾಜಿ ಪುರಸಭೆ ಅಧ್ಯಕ್ಷ ರಾಜಶೇಖರ ಮೂಗಿ, ವೀರೇಶ ಹಲಕಿ, ಮಹೇಶ ಕೊಟಗಿ, ಶ್ರೀಶೈಲ ಶರಣಪ್ಪನವರ, ಗೌಡಪ್ಪ ಪಾಟೀಲ ಹಾಗೂ ಇತರರು ಇದ್ದರು.

ಸುದ್ದಿ ಓದಿ