ಸೇನೆಯ ಟ್ರೈನಿಂಗ್ ಅಕಾಡೆಮಿ ಸ್ಥಾಪಿಸಿದರೆ ಸಂಪೂರ್ಣ ಸಹಾಯ, ಸಹಕಾರ: ದುಂಡಿಗೌಡ್ರ
ಲೋಕದರ್ಶನ ವರದಿ
ಶಿಗ್ಗಾವಿ 13: ತಾಲೂಕಿನ ಪ್ರತಿಯೊಬ್ಬ ಯುವಕರಿಗೂ ಸೇನೆಗೆ ಸೇರಲು ತರಬೇತಿ ಅವಶ್ಯವಿರುವುದರಿಂದ, ನಿವೃತ್ತ ಯೋಧ ಇಸಾಕ್ಅಹ್ಮದ್ ಮತ್ತೂರ್ ಅವರ ಮಾರ್ಗದರ್ಶನದಲ್ಲಿ ಟ್ರೈನಿಂಗ್ ಅಕಾಡೆಮಿ ಸ್ಥಾಪಿಸಿದರೆ, ನಮ್ಮ ಭಾರತ ಸೇವಾ ಸಂಸ್ಥೆಯಿಂದ ಸಂಪೂರ್ಣ ಸಹಾಯ, ಸಹಕಾರ ನೀಡುವುದಾಗಿ ಭಾರತ ಸೇವಾ ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಭರವಸೆ ನೀಡಿದರು.
ತಾಲೂಕಿನ ಬನ್ನೂರು ಗ್ರಾಮದ ವಿ ಡಿ ಹೊಸಗೌಡ್ರ ಸರಕಾರಿ ಪ್ರೌಢ ಶಾಲೆಯಲ್ಲಿ 1983, 93 ಸಾಲಿನ ಸಹಪಾಠಿ ಸ್ನೇಹಿತರ ಬಳಗದ ವತಿಯಿಂದ ಭಾರತೀಯ ಸೇನೆಯಲ್ಲಿ ಸುಬೇದಾರ್ ಇಸಾಕ್ಅಹ್ಮದ್ ಮತ್ತೂರ ಅವರು ಸುದೀರ್ಘ 28 ವರ್ಷಗಳ ಸೇವೆ ಸಲ್ಲಿಸಿ ತವರಿಗೆ ಆಗಮಿಸಿದ ಹಿನ್ನಲೆಯಲ್ಲಿ ಆಯೋಜಿಸಿದ್ದ ಸೈನಿಕನಿಗೊಂದು ಸಲಾಂ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಯೋಧ ಇಸಾಕ್ಅಹ್ಮದ್ ಅವರ ಬಾಲ್ಯದ ಜೀವನವನ್ನು ನೆನೆದು, ಈಗಿನ ಯುವ ಪೀಳಿಗೆಗೆ ಇವರು ನಡೆದು ಬಂದ ಜೀವನವೇ ಪ್ರೇರಣೆಯಾಗಲಿ ಎಂದರು.
ಗೌರವ ಸಮರ್ಪಣೆ ಸ್ವೀಕರಿಸಿ ಮಾತನಾಡಿದ ಯೋಧ, ಸುಬೇದಾರ್ ಇಸಾಕ್ಅಹ್ಮದ್ ಮತ್ತೂರ, ಪ್ರತಿಯೊಬ್ಬ ವಿದ್ಯಾರ್ಥಿಯು ಯಶಸ್ವಿಯಾಗಲು ಗುರು ಮತ್ತು ಗುರಿ ಸ್ಪಷ್ಟವಾಗಿರಬೇಕು, ಉತ್ತಮ ಗುರುವಿನ ಮಾರ್ಗದರ್ಶನ, ನಿಖರವಾದ ಗುರಿಯೆಡಿಗೆ ಸತತ ಪರಿಶ್ರಮ ಮತ್ತು ಪ್ರಯತ್ನದಿಂದ ಮಾತ್ರ ಪ್ರತಿಫಲ ದೊರೆಯುತ್ತದೆ ಈಗ ಭಾರತೀಯ ಸೇನೆಯು ವಿಶ್ವದಲ್ಲಿಯೇ ಬಲಾಢ್ಯ ಪಡೆಯನ್ನು ಹೊಂದಿದೆ, ಅಂತಹ ವಿಶ್ವ ಶ್ರೇಷ್ಠ ಸೈನ್ಯದಲ್ಲಿ ತಾವೆಲ್ಲರೂ ಸೇರಬೇಕಾದರೆ, ಈಗಿನಿಂದಲೇ ಪಾಠ ಪ್ರವಚನಗಳ ಜೊತೆ ದೈಹಿಕ ಸಾಮಥ್ರ್ಯದೆಡೆಗೆ ಗಮನ ಕೊಡಬೇಕೆಂದು ಕಿವಿ ಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನ ಶಾಲೆಯ ಮುಖ್ಯೋಪಾಧ್ಯಾಯರಾದ ಬಿ ಶ್ರೀನಿವಾಸ್ ವಹಿಸಿ ಮಾತನಾಡಿದರು, ಸಹಪಾಠಿ ಸ್ನೇಹಿತರ ಬಳಗದಿಂದ ನಿವೃತ್ತ ಸೇನಾನಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಟಾಕನಗೌಡ್ರ ಪಾಟೀಲ, ಶಂಕರಗೌಡ ದುಂಡಿಗೌಡ್ರ, ವೀರನಗೌಡ್ರ ಹೊನ್ನಾಗೌಡ್ರ, ಶಂಕರಗೌಡ್ರ ಪೋಲೀಸಗೌಡ್ರ, ವಿ ಜಿ ಭಾವಿಕಟ್ಟಿ, ಗ್ರಾಪಂ ಅದ್ಯಕ್ಷೆ ಸರೋಜಾ ಕಮ್ಮಾರ, ಪಿಡಿಓ ಬಸವರಾಜ ಪೂಜಾರ, ಯಶೋಧಾ ಹಡಪದ, ಎನ್ ಸಿ ಸಿದ್ದಣ್ಣವರ, ಸಹ ಶಿಕ್ಷಕ ಶಂಬುಲಿಂಗ, ಬಸವರಾಜ ಮಾಯಣ್ಣವರ ಸೇರಿದಂತೆ ಬನ್ನೂರ ಗ್ರಾಮ ಪಂಚಾಯತಿಯ ಸದಸ್ಯರು, ಸಿಬ್ಬಂದಿಗಳು, ಗ್ರಾಮದ ಹಿರಿಯರು, ಯುವಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು