ಸ್ವಾತಂತ್ರ್ಯ ಹೋರಾಟಗಾರರ ವಿಶೇಷ ದಿನದರ್ಶಿಕೆ ಬಿಡುಗಡೆ
ರಾಣಿಬೆನ್ನೂರ 10: ಇಂದಿನ ಮಕ್ಕಳಿಗೆ ನಮ್ಮ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನದ ಬಗ್ಗೆ ಮಾಹಿತಿ ಇರಬೇಕು. ಅಂದಾಗ ಮಾತ್ರ ಸ್ವಾತಂತ್ರ್ಯದ ಬಗ್ಗೆ ಗೌರವ ಅರಿಯಲು ಸಾಧ್ಯ ಎಂದು ರಾಷ್ಟ್ರಗೌರವ ಸಂರಕ್ಷಣ ಪರಿಷತ್ನ ಸಂಸ್ಥಾಪಕ ಅದ್ಯಕ್ಷ ಟಿ ಎನ್ ರಾಮಕೃಷ್ಣ ಹೇಳಿದರು.
ತಾಲೂಕಿನ ಕೊಡಿಯಾಲ ಹೊಸಪೇಟೆಯ ಪುಣ್ಯಕೋಟಿ ಮಠದಲ್ಲಿ ಚಿತ್ರಕಲಾವಿದ ಡಾ. ಜಿ.ಜೆ. ಮೆಹೆಂದಳೆ ರಚಿಸಿದ ಸ್ವಾತಂತ್ರ್ಯ ಹೋರಾಟಗಾರರ ವಿಶೇಷ ದಿನದರ್ಶಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಅಂದಿನ ಕಾಲದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಕಪ್ಪು-ಬಿಳುಪಿನ ಫೋಟೋಗಳು ಕಾಲ್ಪನಿಕ ರೇಖಾಚಿತ್ರಗಳು ಇದ್ದವು ಅವುಗಳನ್ನು ಈ ದಿನರ್ಶಿಕೆಗಾಗಿ ಚಿತ್ರಕಲಾವಿದ ಡಾಽ ಜಿ ಜೆ ಮೆಹೆಂದಳೆಯವರು ಕಪ್ಪು-ಬಿಳುಪಿನ ಫೋಟೋಗಳನ್ನು ಬಣ್ಣದಲ್ಲಿ ಬರೆದಿರುತ್ತಾರೆ. ದಿನದರ್ಶಿಕೆಯಲ್ಲಿ ಆಯಾ ದಿನದಂದು ಅವರ ಸ್ಮೃತಿ ಅಥವಾ ಜನ್ಮದಿನ ನೆನಪಿಸುವ ಹೋರಾಟಗಾರರ ಚಿಕ್ಕ ಫೋಟೊವನ್ನು ಮುದ್ರಿಸಲಾಗಿದೆ. ಅಲ್ಲದೇ ಪ್ರತಿ ತಿಂಗಳು ಒಬ್ಬ ಸ್ವಾತಂತ್ರ್ಯ ಹೋರಾಟಗಾರರ ಪರಿಚಯ ಕನ್ನಡ ಹಾಗೂ ಇಂಗ್ಲೀಷನಲ್ಲೂ ವಿವರಿಸಲಾಗಿದೆ ಎಂದರು.
ನೇತಾಜಿ ಸುಭಾಶ್ ಚಂದ್ರ ಬೋಸ್ ರವರ 125ನೇ ಜನ್ಮಾಚರಣೆ, ವಾಸುದೇವ ಬಲವಂತ ಫಡ್ಕೇ ರವರ 175ನೇ ಜನ್ಮಾಚರಣೆ ಅಂಗವಾಗಿ ಇಂದಿನ ಮಕ್ಕಳಿಗೆ ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಮಾಹಿತಿ ತಿಳಿಸಿಕೊಡಲು ವಿಶೇಷ ದಿನದರ್ಶಿಕೆ ರಚಿಸಿದ್ದಾರೆ. ಇದರಿಂದ ಇಂದಿನ ಪೀಳೆಗೆಗಳಿಗೆ ಸ್ವಾತಂತ್ರ್ಯ ಮಹತ್ವ ಅರಿವಾಗಲಿದೆ ಎಂದರು.
ಪುಣ್ಯಕೋಟಿ ಮಠದ ಬಾಲಯೋಗಿ ಜಗದೀಶ್ವರ ಸ್ವಾಮಿಜಿಗಳು ಮಾತನಾಡಿ, ಇಂದು ವಿದ್ಯಾರ್ಥಿಗಳು ದೇಶ ಪ್ರೇಮ ರಾಷ್ಟ್ರ ಭಕ್ತಿಯನ್ನು ಮರೆತು ಸ್ವೇಚ್ಛಾಚಾರಿಗಳಾಗುತ್ತಿದ್ದಾರೆ. ಇಂತಹ ಸಮಯದಲ್ಲಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಇಂತಹ ದಿನದರ್ಶಿಕೆ, ದಿನಪತ್ರಿಕೆ, ಶಾಲಾ ಶಿಕ್ಷಕರ ದಿನನಿತ್ಯ ಪ್ರಾರ್ಥನಾ ಸಮಯದಲ್ಲಿ ಒಬ್ಬೋಬ್ಬರ ಬಗೆಗೆ ಮಾಹಿತಿ ನೀಡುವುದು, ಶಾಲಾ ಗೋಡೆಗಳ ಮೇಲೆ ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಚಿತ್ರಪಟಗಳ ಅನಾವರಣ ಮೊದಲಾದ ಚಟುವಟಿಕೆಗಳು ಬೇಕಾಗಿದೆ ಎಂದರು.
ಧನೋಷ್ಮಿ ಸಂಘದ ಅಧ್ಯಕ್ಷ ಚರಣ ಅಂಗಡಿ ಮಾತನಾಡಿ, ಇಂದು ನಮ್ಮ ಶಾಲಾ ಮಕ್ಕಳಿಗೆ ಕೆಲವೇ ಕೆಲವರನ್ನು ಬಿಟ್ಟರೆ ಅನೇಕ ಸ್ವಾತಂತ್ರ್ಯ ಹೋರಾಟಗಾರರ ಪರಿಚಯವೇ ಇಲ್ಲ. ಹೀಗಾಗಿ ಅವರ ಚಿತ್ರ ಹಾಗೂ ಅವರ ಕಾಲಘಟ್ಟವನ್ನು ಪರಿಚಯಿಸಿಕೊಡಲು ಈ ದಿನದರ್ಶಿಕೆ ಬಹು ಮುಖ್ಯ ಎಂದರು.
ಚಿತ್ರಕಲಾವಿದ ಡಾಽ ಜಿ.ಜೆ. ಮೆಹೆಂದಳೆ, ಮಹೇಶ ಗೋಣೆಪ್ಪನವರ್, ಹರೀಶ್ ಆರ್.ಆರ್, ಸಿದ್ದಾರ್ಥ ಯಡಿಯಾಪುರ್, ವಿಜಯ ಎಂ.ಯು, ಮಧು ಚಳಗೇರಿ ಇದ್ದರು.