ಡಿಜಿಟಲ್ ಕಲಿಕೆಗಾಗಿ ಉಚಿತ ಟ್ಯಾಬ್ಲೆಟ್ ವಿತರಣೆ:
ಸರ್ಕಾರಿ ಪದವಿ ಕಾಲೇಜಿನಲ್ಲಿರುವ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಿ ಶಾಸಕ ಅರುಣಕುಮಾರ ಪೂಜಾರ
ರಾಣೇಬೆನ್ನೂರು 25: ಇಂದು ಇಡೀ ಜಗತ್ತು ಕೋವಿಡ್-19 ಸಾಂಕ್ರಮಿಕದಿಂದ ತತ್ತರಿಸಿ ಹೋಗಿದೆ. ವ್ಯವಹಾರಗಳ ಜೊತೆಗೆ ಶಿಕ್ಷಣ ಕ್ಷೇತ್ರಕ್ಕೂ ಕೂಡ ಪೆಟ್ಟು ಬಿದ್ದಿದೆ. ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ಹೋಗೋಕ್ಕಾಗದೇ ಶಿಕ್ಷಣ ಕುಂಠಿತಗೊಂಡಿದೆ. ಇಂತಹ ಸಂದಿಗ್ಧ ಸಮಯದಲ್ಲಿ ಅನ್ಲೈನ್ ಶಿಕ್ಷಣ ಅನಿವಾರ್ಯವಾಗಿದೆ. ಇದಕ್ಕಾಗಿ ಮುಖ್ಯಮಂತ್ರಿ ಯಡಿಯೂರ್ಪನವರ ನೇತೃತ್ವದ ಸರ್ಕಾರ ಬಡ ವಿದ್ಯಾರ್ಥಿಗಳಿಗೆ ಆನ್ಲೈನ್ ಡಿಜಿಟಲ್ ಕಲಿಕೆಗಾಗಿ ಉಚಿತ ಟ್ಯಾಬ್ಲೆಟ್ ನೀಡುತ್ತಿದ್ದು, ಇದರ ಸದುಪಯೋಗಪಡೆದುಕೊಳ್ಳಿ ಎಂದು ಶಾಸಕ ಅರುಣಕುಮಾರ ಪೂಜಾರ ಕರೆ ನೀಡಿದರು.
ಅವರು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಡಿಜಿಟಲ್ ಕಲಿಕೆಯ ಅಂಗವಾಗಿ ಕಾಲೇಜಿನ ಬಡ ವಿದ್ಯಾರ್ಥಿಗಳಿಗೆ “ಉಚಿತ ಟ್ಯಾಬ್ಲೆಟ್” ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಆನ್ಲೈನ್ ಹಾಗೂ ಆಫ್ಲೈನ್ ಎರಡೂ ಪದ್ಧತಿಯು ಕಲಿಕೆಗೆ ಪೂರಕವಾಗಿದೆ. ಸಾಂಪ್ರದಾಯಿಕ ಶಿಕ್ಷಣವನ್ನು ಬಲಗೊಳಿಸಿ ಆಧುನಿಕ ಸ್ಪರ್ಷ ನೀಡುವ ಮೂಲಕ ಉನ್ನತ ಶಿಕ್ಷಣದಲ್ಲಿ ಕ್ರಾಂತಿಕಾರಕ ಬದಲಾವಣೆಯನ್ನು ಮೂಡಿಸಲಿರುವ “ಡಿಜಿಟಲ್ ಕಲಿಕಾ ಯೋಜನೆಗೆ” ಪ್ರಸ್ತುತ ವಿದ್ಯಾರ್ಥಿಗಳಿಗೆ ವಿತರಿಸಲಾಗುತ್ತಿರುವ ಉಚಿತ ಟ್ಯಾಬ್ಲೆಟ್ಗಳು ಅತ್ಯಂತ ಸಹಕಾರಿಯಾಗಿವೆ ಎಂದು ಅರುಣಕುಮಾರ ಪೂಜಾರ ಹೇಳಿದರು. ಅದ್ಯಕ್ಷತೆ ವಹಿಕೊಂಡಿದ್ದ ಪ್ರಾಂಶುಪಾಲರಾದ ಎಲ್.ವಿ.ಸಂಗಳದ ಮಾತನಾಡಿ ಕಾಲೇಜಿನ ಕರ್ನಾಟಕ ಎಲ್.ಎಮ್.ಎಸ್. ಎಂಬ ಕಲಿಕಾ ನಿರ್ವಹಣಾ ವೇದಿಕೆಯ ಮೂಲಕ ಆನ್ಲೈನ್ ಕಲಿಕೆಯನ್ನು ಅನುಷ್ಟಾನಗೊಳಿಸಲಾಗುತ್ತಿದೆ. ನಮ್ಮ ಕಾಲೇಜು ಇದೀಗ ಉತ್ಕೃಷ್ಟ ಪೀಠೋಪಕರಣ, ಪ್ರಾಯೋಗಿಕ ಉಪಕರಣ, ಸ್ಮಾರ್ಟಕ್ಲಾಸ್ ರೂಂ, ಗ್ರಂಥಾಲಯ, ಆಧುನಿಕ ಕಂಪ್ಯೂಟರ್ ಸೈನ್ಸ್ ಪ್ರಯೋಗಾಲಯ ಹೀಗೆ ಹೀಗೆ ಹತ್ತು ಹಲವಾರು ಸೌಲಭ್ಯಗಳನ್ನು ಹೊಂದಿದೆ, ವಿದ್ಯಾರ್ಥಿಗಳ ಇವುಗಳ ಸದ್ಬಳಕೆ ಮಾಡಿಕೊಂಡು ಉನ್ನತ ಸ್ಥಾನಕ್ಕೆ ಹೋಗುವ ಗುರಿ ಹೊಂದಬೇಕು ಎಂದರು. ಡಾ.ಎ.ವಿ.ಕುರ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಶಾಸಕ ಅರುಣಕುಮಾರ ಪೂಜಾರ ಅವರು ಸ್ಮಾರ್ಟಕ್ಲಾಸ್ ಉದ್ಘಾಟಿಸಿದರು. ಕಂಪ್ಯೂಟರ್ ಸೈನ್ಸ್ ಮುಖ್ಯಸ್ಥರಾದ ಡಾ.ಅರುಣಕುಮಾರ ಚಂದನ್ ಸ್ವಾಗತಿಸಿದರು. ಐಟಿ ಸಂಯೋಜಕರಾದ ಸುನೀಲ ಎಂ.ಎಚ್. ವಂದಿಸಿದರು. ಡಾ.ಎಲ್.ಎಂ.ಪೂಜಾರ ನಿರೂಪಿಸಿದರು. ವಿದ್ಯಾರ್ಥಿ ಸುನೀಲ ಘಟರೆಡ್ಡಿಹಾಳ ಪ್ರಾಥಿಸಿದರು. ಆರ್ಹ ಪ್ರಥಮ ವರ್ಷದ 508 ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್ ನೀಡಲಾಗುತ್ತಿದೆ. ಆರ್.ಎಫ್.ಅಯ್ಯನಗೌಡ್ರ, ಡಾ.ಶೋಭಾ ಸಾವಕಾರ, ಬಸವರಾಜ ಹುಗ್ಗಿ, ಶ್ರೀದೇವಿ, ಹನುಮಂತಗೌಡ ಸೇರಿದಂತೆ ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಫಲಾನುಭವಿ ವಿದ್ಯಾರ್ಥಿಗಳ ಪೈಕಿ ಆಯ್ದ 10ಜನರಿಗೆ ಸಾಂಕೇತಿಕವಾಗಿ ಟ್ಯಾಬ್ಲೆಟ್ಗಳನ್ನು ವಿತರಿಸಲಾಯಿತು.