ಜಮಖಂಡಿ

ಜಾನುವಾರುಗಳ ಉಚಿತ ಆರೋಗ್ಯ ತಪಾಸಣೆ

ಜಾನುವಾರುಗಳ ಉಚಿತ ಆರೋಗ್ಯ ತಪಾಸಣೆ

ಲೋಕದರ್ಶನ ವರದಿ,

ಜಮಖಂಡಿ 24: ತಾಲೂಕಿನ ತುಂಗಳ ಗ್ರಾಮದ ದಿ.ಬಾಲವ್ವ ಪಾಂಡಪ್ಪ ಗಿರಡ್ಡಿ ಸ್ಮರಣಾರ್ಥ ಡಾ.ಟಿ.ಪಿ. ಗಿರಡ್ಡಿ ಪ್ರಾಯೋಜಿತ ಜಾನುವಾರುಗಳ ಉಚಿತ ಆರೋಗ್ಯ ತಪಾಸಣೆ ಮತ್ತು ಉಪಚಾರ ಶಿಬಿರ ಮಧುರಖಂಡಿ ಗ್ರಾಮದಲ್ಲಿ ಯಶಸ್ವಿಯಾಗಿ ಜರುಗಿತು.

ಸ್ಥಳೀಯ ಬಿಎಲ್ಡಿಇ ಸಂಸ್ಥೆಯ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಆಶ್ರಯದಲ್ಲಿ ಜರುಗುತ್ತಿರುವ ಎನ್ಎಸ್ಎಸ್ ವಿಶೇಷ ಸೇವಾ ಶಿಬಿರದ ಅಂಗವಾಗಿ ಜಮಖಂಡಿಯ ಸಕರ್ಾರಿ ಪಶು ಆಸ್ಪತ್ರೆಯ ಸಹಯೋಗದಲ್ಲಿ ಶಿಬಿರ ಜರುಗಿತು.

ಆಕಳು, ಎಮ್ಮೆ ಸೇರಿದಂತೆ ಸುಮಾರು 4-5 ಹಿಂಡುಗಳ ಕುರಿ ಮತ್ತು ಆಡುಗಳ ಆರೋಗ್ಯ ತಪಾಸಣೆ ನಡೆಸಿ ಸೂಕ್ತ ಉಪಚಾರ ನೀಡಲಾಯಿತು. ಬರಡು ದನಗಳಿಗೆ ಚಿಕಿತ್ಸೆ ನೀಡಲಾಯಿತು. ಜಾನುವಾರುಗಳು ಗರ್ಭ ಧರಿಸಿದ ಬಗ್ಗೆ ಪರೀಕ್ಷೆ ನಡೆಸಲಾಯಿತು. ಜಾನುವಾರುಗಳಿಗೆ ಲಸಿಕೆ ಹಾಕಿ ಹಾಗೂ ಇಂಜೆಕ್ಷನ್ ನೀಡಿ ಉಪಚರಿಸಲಾಯಿತು. ಅಲ್ಲದೆ ಪೌಡರ್ ಮತು ಮಾತ್ರೆಗಳನ್ನು ವಿತರಿಸಲಾಯಿತು.

ಕುಲಹಳ್ಳಿಯ ಪಶು ಚಿಕಿತ್ಸಾಲಯದ ಹಿರಿಯ ಪಶು ವೈದ್ಯಕೀಯ ಅಧಿಕಾರಿ ಡಾ.ಸಂಜೀವ ಬುಜರುಕ ಮಾತನಾಡಿ, ಪಶು ಸಂಪತ್ತು ದೇಶದ ನಿಜವಾದ ಸಂಪತ್ತು. ಪಶು ಸಂಪತ್ತು ಸಮೃದ್ಧವಾಗಿದ್ದರೆ ಆಹಾರ ಧಾನ್ಯಗಳ ಕೊರತೆ ಉಂಟಾಗುವುದಿಲ್ಲ. ಸಾಂಕ್ರಾಮಿಕ ರೋಗಗಳು ಹಾಗೂ ಚರ್ಮ ಗಂಟು ರೋಗದಿಂದ ಜಾನುವಾರುಗಳು ಸಾವನ್ನಪ್ಪಿದರೆ ರೈತರಿಗೆ ನಷ್ಟ ಉಂಟಾಗುತ್ತದೆ. ಆದ್ದರಿಂದ ಆದ್ಯತೆ ಮೇಲೆ ಲಸಿಕಾ ಮತ್ತು ಉಪಚಾರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದರು.

ಜಮಖಂಡಿಯ ಸರ್ಕಾರಿ ಪಶು ಆಸ್ಪತ್ರೆಯ ಮುಖ್ಯ ಪಶು ವೈದ್ಯಾಧಿಕಾರಿ ಡಾ.ಸಿ.ಎಸ್. ನಿಂಬಾಳ, ಮುಖ್ಯ ಪಶು ವೈದ್ಯಾಧಿಕಾರಿ ಡಾ.ಪಿ.ಎಸ್. ಗೂಳಪ್ಪಗೋಳ, ಮೈಗೂರಿನ ಪಶು ಚಿಕಿತ್ಸಾಲಯದ ಹಿರಿಯ ಪಶು ವೈದ್ಯಕೀಯ ಅಧಿಕಾರಿ ಡಾ.ಸಂಜೀವ ನೇಮಗೌಡ, ಕೊಣ್ಣೂರಿನ ಹಿರಿಯ ಪಶು ವೈದ್ಯಕೀಯ ಪರೀಕ್ಷಕ ಹೊಸಮನಿ, ಚೇತನ ಗುರವ, ಶಿವಾನಂದ ಗಾಣಿಗೇರ ಶಿಬಿರವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.

ಶಿಬಿರದ ಪ್ರಾಯೋಜಕ ಡಾ.ಟಿ.ಪಿ. ಗಿರಡ್ಡಿ, ಎನ್ಎಸ್ಎಸ್ ಅಧಿಕಾರಿ ಡಾ.ಎಸ್.ಎಂ. ಬಿಜಾಪುರ, ಎನ್ಎಸ್ಎಸ್ ಅಧಿಕಾರಿ ಡಾ.ವಿ.ಎಸ್. ಕುಲಕರ್ಣಿ ಹಾಗೂ ಎನ್ಎಸ್ಎಸ್ ಶಿಬಿರಾರ್ಥಿಗಳು ಶಿಬಿರದ ಯಶಸ್ಸಿಗೆ ಶ್ರಮಿಸಿದರು. 


ಸುದ್ದಿ ಓದಿ