ಶಿಗ್ಗಾವ್

ವಿಶ್ವ ಕ್ಯಾನ್ಸರ ದಿನಾಚರಣೆ ನಿಮಿತ್ಯ ಉಚಿತ ತಪಾಸಣೆ

ವಿಶ್ವ ಕ್ಯಾನ್ಸರ ದಿನಾಚರಣೆ ನಿಮಿತ್ಯ ಉಚಿತ ತಪಾಸಣೆ

ಶಿಗ್ಗಾವಿ 09: ನಮ್ಮ ಆರೋಗ್ಯದ ಬಗ್ಗೆ ನಾವು ನಿಷ್ಕಾಳಜಿ ಮಾಡದೇ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿದರೆ ಎಲ್ಲ ರೋಗಗಳಿಂದ ನಾವು ಮಕ್ತಿಯನ್ನು ಪಡೆಯಬಹುದು ಎಂದು ಹುಬ್ಬಳ್ಳಿ ಗರ್ಭಕಂಠ ಕ್ಯಾನ್ಸರ ತಜ್ಞ ವೈದ್ಯ  ಡಾ. ವಿನಯ ಮುತ್ತಗಿ ಹೇಳಿದರು. 

ಪಟ್ಟಣದ ತಾಲೂಕ ಆರೋಗ್ಯಾಧಿಕಾರಿಗಳ ಕಾರ್ಯಾಲಯದ ಸಭಾಂಗಣದಲ್ಲಿ ಸಾರ್ವಜನಿಕ ಆಸ್ಪತ್ರೆ ಶಿಗ್ಗಾವಿ ಹಾಗೂ ತಾಲೂಕ ಆರೋಗ್ಯಾಧಿಕಾರಿಗಳ ಕಾರ್ಯಾಲಯ ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ಕ್ಯಾನ್ಸರ ದಿನಾಚರಣೆ ನಿಮಿತ್ಯ ಉಚಿತ ತಪಾಸಣೆ ಶಿಬಿರದಲ್ಲಿ ಸಸಿಗೆ ನೀರುಣಿಸಿ ಮಾತನಾಡಿದ ಅವರು ಕ್ಯಾನ್ಸರನಲ್ಲಿ ಅನೇಕ ತರಹದ ಪ್ರಬೇಧಗಳಿದ್ದು ಅವುಗಳ ಬಗ್ಗೆ ಮುಂಜಾಗ್ರತೆವಹಿಸಿ, ಆತ್ಮಸ್ತೈರ್ಯವನ್ನು ಹೆಚ್ಚಿಸಿಕೊಂಡು, ವೈದ್ಯರ ನಿರಂತರ ಬೇಟಿ, ಚಿಕಿತ್ಸೆ, ಅನುಸರಣೆ ಮಾಡಿದರೆ ಕ್ಯಾನ್ಸರ ಉಲ್ಬಣವಾಗದ ಹಾಗೇ ತಡೆಗಟ್ಟಿ ನಿಮ್ಮ ಸುಂದರ ಬದುಕನ್ನು ನೀವು ರೂಪಿಸಿಕೊಳ್ಳಬಹುದು ಎಂದರು. 

ಸ್ತನ ಕ್ಯಾನ್ಸರ ತಜ್ಞ ವೈದ್ಯ ಡಾ. ಸಂತೋಷ ಚಿಕ್ಕರೆಡ್ಡಿ ಮಾತನಾಡಿ ಇಂದಿನ ದಿನಗಳಲ್ಲಿ ಮಹಿಳೆಯರು ಮಕ್ಕಳಿಗೆ ಎದೆ ಹಾಲು ಕನಿಷ್ಠ 2 ವರ್ಷದ ವರೆಗೆ ಕುಡಿಸಬೇಕು ಅದನ್ನು ಬಿಟ್ಟು 6 ತಿಂಗಳಿಗೆ ಮುಖದ ಸೌಂದರ್ಯ ಹಾಳಾಗುತ್ತದೆ ಎಂದು ಎದೆಹಾಲು ಕುಡಿಸದೇ ಸೌಂದರ್ಯದ ಬಗ್ಗೆ ಆಸಕ್ತಿ ತೋರಿಸಿದರೆ ಅದು ಸ್ತನ ಕ್ಯಾನ್ಸರ ಆಗುವ ಸಾಧ್ಯತೆ ಹೆಚ್ಚು ಅಲ್ಲದೇ ಯಾವುದೇ ಕಾಯಿಲೆಗಳು ಬಂದರು ಮೊದಲಿಗೆ ಅದರ ಬಗ್ಗೆ ಆತಂಕ ಪಡದೇ ಆ ಕಾಯಿಲೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡು ದೈರ್ಯದಿಂದ ಬಂದ ಕಾಯಿಲೆಗಳಿಗೆ ಉತ್ತಮ ಚಿಕಿತ್ಸೆ ಪಡೆಯುತ್ತಾ ಪೌಷ್ಠಿಕಾಂಶಯುಕ್ತ  ಆಹಾರವನ್ನು ಪಡೆಯುತ್ತಾ ಹೋಗಬೇಕು ಎಂದರು. 

ತಾಲೂಕ ಆರೋಗ್ಯಾಧಿಕಾರಿ ಡಾ.ಮನೋಜ ನಾಯ್ಕ ಮಾತನಾಡಿ ಕ್ಯಾನ್ಸರ ಬಗ್ಗೆ ಭಯಬೇಡ ದೈರ್ಯವಿರಲಿ ಹಾಗೂ ಅಲಕ್ಷ್ಯ ಮಾಡದೇ ವೈದ್ಯರ ನಿರಂತರ ಚಿಕಿತ್ಸೆ ಹಾಗೂ ಕುಟುಂಬದ ಸದಸ್ಯರ ನೈತಿಕ ಬೆಂಬಲವಿದ್ದರೆ ಎಂತಹ ರೋಗಗಳನ್ನಾದರೂ ನಿಯಂತ್ರಣ ಮಾಡಬಹುದು ಎಂದರು. 

ಈ ಸಂದರ್ಭದಲ್ಲಿ ಸಾರ್ವಜನಿಕ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ.ವಿವೇಕ ಜೈನಕೇರಿ, ಡಾಽಽ ತಬುಸುಮ್, ಜಗನ್ನಾತ ಕಮತರ, ಸರೋಜಾ ಹರಿಜನ,  ಸೇರಿದಂತೆೆ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು, ಆರ್‌.ಬಿ.ಎಸ್‌.ಕೆ ವೈದ್ಯಾಧಿಕಾರಿಗಳು, ಆಶಾಕಾರ್ಯಕರ್ತೆಯರು, ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಹಿರಿಯ ಆರೋಗ್ಯ ನೀರೀಕ್ಷಕ ಶ್ರೀಕಾಂತ ಸರ್ಜಾಪೂರ ಕಾರ್ಯಕ್ರಮ ನಿರ್ವಹಿಸಿದರು. 


ಸುದ್ದಿ ಓದಿ