ಯಮುನಾ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ರಸ್ತೆ ಅಪಘಾತ:ನಾಲ್ವರು ಸಾವು
ಮಥುರಾ, ಆಗಸ್ಟ್ 12: ಇಲ್ಲಿನ ಯಮುನಾ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಬುಧವಾರ ಬೆಳಿಗ್ಗೆ ಎರಡು ವಾಹನಗಳ ಮಧ್ಯೆ ಡಿಕ್ಕಿ ಸಂಭವಿಸಿ ಖಾಸಗಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ಪ್ರಯಾಣಿಕರು ಸಾವನ್ನಪ್ಪಿದ್ದು, ಇತರ 8 ಮಂದಿ ಗಾಯಗೊಂಡಿದ್ದಾರೆ.
ಬಿಹಾರದ ಕತಿಹಾರ್‌ನಿಂದ ಖಾಸಗಿ ಬಸ್ ದೆಹಲಿಗೆ ತೆರಳುತ್ತಿದ್ದಾಗ 105ನೇ ಮೈಲಿಗಲ್ಲು ಬಳಿ ಇದ್ದಕ್ಕಿದ್ದಂತೆ ನಿಂತಿದ್ದು, ಹಿಂದಿನಿಂದ ವೇಗವಾಗಿ ಬಂದ ಟ್ರಕ್, ಬಸ್‍ಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಳಿಗ್ಗೆ ಸುಮಾರು 7.30ಕ್ಕೆ ಈ ಘಟನೆ ಸಂಭವಿಸಿದ್ದು, ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಾಯಗೊಂಡವರಲ್ಲಿ ಐವರನ್ನು ಮಥುರಾದ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.
ಮೃತರನ್ನು ಬಿಹಾರದ ಕತಿಹಾರ್ ಮೂಲದ ಮೊಹಮ್ಮದ್ ರಂಜಾನಿ, ಮೊಹಮ್ಮದ್ ಸಂಶರ್ ಮತ್ತು ಗೋಪಾಲ್ ಸಿಂಗ್ ಎಂದು ಗುರುತಿಸಲಾಗಿದ್ದು, ಟ್ರಕ್ ಚಾಲಕ ಪ್ರಯಾಗರಾಜ್ ನಿವಾಸಿ ನರೇಂದ್ರ ಮಿಶ್ರಾ ಸಹ ಸಾವನ್ನಪ್ಪಿದ್ದಾನೆ.
ಪೊಲೀಸರು ಪ್ರಕಟಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.