8 ಬಾರಿಯ ಸಂಸದ, ಮಾಜಿ ಕೇಂದ್ರ ಸಚಿವ ರಶೀದ್ ಮಸೂದ್ ಸಹರಾನ್ಪುರ್ ನಲ್ಲಿ ನಿಧನ
ಸಹರಾನ್ಪುರ್, ಅಕ್ಟೋಬರ್ 5: ಮಾಜಿ ಕೇಂದ್ರ ಸಚಿವ ಹಾಗೂ ಎಂಟು ಬಾರಿ ಸಂಸದರಾಗಿದ್ದ ರಶೀದ್ ಮಸೂದ್ ಅವರು ದೀರ್ಘಕಾಲೀನ ಅನಾರೋಗ್ಯದಿಂದ ಸೋಮವಾರ ಇಲ್ಲಿ ನಿಧನಹೊಂದಿದ್ದಾರೆ.
ಅವರಿಗೆ 73 ವರ್ಷ ವಯಸ್ಸಾಗಿತ್ತು.
ಕೆಲವು ದಿನಗಳ ಹಿಂದೆ ರಶೀದ್ ಅವರಿಗೆ ಕೋವಿಡ್ -19 ಸೋಂಕು ದೃಢಪಟ್ಟ ನಂತರ ನವದೆಹಲಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೋಂಕಿನಿಂದ ಚೇತರಿಸಿಕೊಂಡ ನಂತರ ಮೂರು ದಿನಗಳ ಹಿಂದೆ ಸಹರಾನ್ಪುರಕ್ಕೆ ವಾಪಸ್ಸಾಗಿದ್ದರು. ಆದರೆ ಭಾನುವಾರ ಅವರ ಆರೋಗ್ಯ ಗಂಭೀರವಾಗಿ ರೋರ್ಕಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ ಎಂದು ಅವರ ಕುಟುಂಬ ಸದಸ್ಯರು ತಿಳಿಸಿದ್ದಾರೆ
ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಶಾಸಕ ಇಮ್ರಾನ್ ಮಸೂದ್ ತಮ್ಮ ಚಿಕ್ಕಪ್ಪನ ನಿಧನ ಬಗ್ಗೆ ದೃಢಪಡಿಸಿದ್ದಾರೆ. ರಶೀದ್ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಇಂದು ಸಂಜೆ ಇಲ್ಲಿನ ಗಂಗೋಹ್ ಪ್ರದೇಶದ ಸ್ಮಶಾನದಲ್ಲಿ ನಡೆಯಲಿದೆ. ರಶೀದ್ ಮಸೂದ್ ಅವರು, 1977 ರಲ್ಲಿ ಮೊದಲ ಬಾರಿಗೆ ಸಹರಾನ್ಪುರ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದರು. ನಂತರ 1980,1989,1991 ಮತ್ತು 2004 ರಲ್ಲಿ ಇದೇ ಕ್ಷೇತ್ರದಿಂದ ಆಯ್ಕೆಯಾಗಿದ್ದರು. 1985,2009 ಮತ್ತು 2012 ರಲ್ಲಿ ಅವರು ರಾಜ್ಯಸಭಾ ಸದಸ್ಯರಾಗಿದ್ದರು.
1990 ರಲ್ಲಿ ಮಸೂದ್ ಅವರು ಕೇಂದ್ರದಲ್ಲಿ ವಿ ಪಿ ಸಿಂಗ್ ನೇತೃತ್ವದ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿದ್ದರು.