ರಾಷ್ಟ್ರೀಯ

ಕೋವಿಡ್ : ಮಾಜಿ ಕಾಂಗ್ರೆಸ್ ಸಂಸದ ಕಾರ್ತಿಕೇಶ್ವರ್ ಪಾತ್ರಾ ನಿಧನ

ಕೋವಿಡ್ : ಮಾಜಿ ಕಾಂಗ್ರೆಸ್ ಸಂಸದ  ಕಾರ್ತಿಕೇಶ್ವರ್ ಪಾತ್ರಾ ನಿಧನ

ಭುವನೇಶ್ವರ್, ಅಕ್ಟೋಬರ್ 06 : ಕೋವಿಡ್ ಸೋಂಕಿಗೆ ಒಳಗಾಗಿದ್ದ ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಸಂಸದ ಕಾರ್ತಿಕೇಶ್ವರ ಪಾತ್ರಾ ನಿಧನರಾಗಿದ್ದಾರೆ.

ಅನಾರೋಗ್ಯ ಉಲ್ಪಣಿಸಿದ ಕಾರಣ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗಲೇ  81 ವರ್ಷ ವಯಸ್ಸಿನ ಪಾತ್ರಾ ಸೋಮವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ.

ಕೋವಿಡ್ ಸೋಂಕು ದೃಢಪಟ್ಟ ಬಳಿಕ ಮನೆಯಲ್ಲಿಯೇ ಕ್ವಾರಂಟೈನ್ ನಲ್ಲಿದ್ದ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದ್ದರಿಂದ ಕಳೆದ ರಾತ್ರಿ ಭುವನೇಶ್ವರ ಆಸ್ಪತ್ರೆಗೆ ಕರೆದೊಯ್ಯುವಾಗ ಅವರು ಮೃತಪಟ್ಟಿದ್ದಾರೆ.

 ಮೇ 25,1941 ರಂದು ಬಾಲಸೋರ್ ಜಿಲ್ಲೆಯ ಭೋಗ್ರಾಯ್ ಬ್ಲಾಕ್‌ನಲ್ಲಿರುವ ಸುಂದವಾಡಿ ಗ್ರಾಮದಲ್ಲಿ ಜನಿಸಿದ ಅವರು 1971, 1974 ಮತ್ತು 1980 ರಲ್ಲಿ ಕಾಂಗ್ರೆಸ್ ಟಿಕೆಟ್‌ನಲ್ಲಿ ಭೋಗ್ರಾಯ್ ವಿಧಾನಸಭಾ ಕ್ಷೇತ್ರದಿಂದ ಒಡಿಶಾ ವಿಧಾನಸಭೆಗೆ ಮತ್ತು 1991 ರಲ್ಲಿ ಬಾಲಸೋರ್ ಲೋಕಸಭಾ ಸ್ಥಾನದಿಂದ ಆಯ್ಕೆಯಾದರು.

 ತಮ್ಮ ರಾಜಕೀಯ ಜೀವನದ ಹೊರತಾಗಿ, ಪಾತ್ರಾ ಅವರು ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ, ಅವುಗಳಲ್ಲಿ ಸಿಪಾಹಿ, ಪೊಡಗಡ್ಸ್, ಸುಬರ್ಣ ಸಮುಕ್ಸ್, ಸಾಮ್ರಾಟ್ ಖರ್ವೇಲಾ, ನರ್ಕರಾ ನಾಮ್ ಅಮರಾವತಿ, ಕರುಬಾಕಿ ಮೊದಲಾದವುಗಳು ಸೇರಿವೆ.

 ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಮಾಜಿ ಸಂಸದರ ನಿಧನಕ್ಕೆ ಸಂತಾಪ ಸೂಚಿಸಿದ್ದು,ಆತ್ಮಕ್ಕೆ ಶಾಂತಿ ಕೋರಿದ್ದಾರೆ. 

 ಮಾಜಿ ಕಾಂಗ್ರೆಸ್ ಮುಖಂಡರ ನಿಧನಕ್ಕೆ ಒಡಿಶಾ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನಿರಂಜನ್ ಪಟ್ನಾಯಕ್ ಸಂತಾಪ ಸೂಚಿಸಿದ್ದಾರೆ.

 "ಅವರ ಸಾವಿನೊಂದಿಗೆ, ಕಾಂಗ್ರೆಸ್ ಉತ್ತಮ ಸಂಘಟಕರನ್ನು ಕಳೆದುಕೊಂಡಿದೆ" ಎಂದು ಒಡಿಶಾ ಕಾಂಗ್ರೆಸ್ ಮುಖ್ಯಸ್ಥರು ಹೇಳಿದ್ದಾರೆ.

ಸುದ್ದಿ ಓದಿ