ಅರಣ್ಯ ರಕ್ಷಕನ ನಿಷ್ಕಾಳಜಿತನಕ್ಕೆ ಅರಣ್ಯ ವಲಯ ನಾಶ: ಶರೀಫ ನದಾಫ
ಬೈಲಹೊಂಗಲ 09: ಅರಣ್ಯ ಇಲಾಖೆ ಬೈಲಹೊಂಗಲ ವಲಯದಲ್ಲಿ ಅರಣ್ಯ ರಕ್ಷಣೆ ಹಾಗೂ ಗಿಡಗಳ ರಕ್ಷಣೆ ಮಾಡುವ ಅರಣ್ಯ ರಕ್ಷಕನ ನಿಷ್ಕಾಳಜಿತನದಿಂದ ಅರಣ್ಯವಲಯಗಳು ಹಾಗೂ ರಸ್ತೆಯ ಪಕ್ಕದ ಗಿಡಗಳು ನಾಶವಾಗುತ್ತಿದ್ದರೂ ಉಪ ವಲಯದ ಸಹಾಯಕ ಅರಣ್ಯಾಧಿಕಾರಿಗಳು ನಿದ್ರಾವಸ್ಥೆ ತಾಳಿದ್ದಾರೆಂದು ಸಾರ್ವಜನಿಕರು ದೂರುತ್ತಿದ್ದಾರೆ.
ಅರಣ್ಯ ಇಲಾಖೆಯು ಈ ವಲಯದ ಸಂರಕ್ಷಣೆಗಾಗಿ ಒರ್ವ ಅರಣ್ಯ ರಕ್ಷಕನಿಗೆ ಜವಾಬ್ದಾರಿ ವಹಿಸಿದ್ದರೂ ಅರಣ್ಯ ರಕ್ಷಕ ಸಿದ್ದಸಮುದ್ರ ಗರ್ಜೂರ ಬೀಟದಲ್ಲಿ ಬರುವ ಅರಣ್ಯವಲಯದಲ್ಲಿ ಸರಿಯಾಗಿ ಕರ್ತವ್ಯ ಲೋಪ ಎಸಗಿದ ಪರಿಣಾಮ ನಿರಂತರವಾಗಿ ಅಲ್ಲಿ ಹಲವರು ಗಿಡಗಳನ್ನು ಕಡಿದು ಸಾಗಾಣಿಕೆ ಮಾಡುವುದು. ಅರಣ್ಯದ ಭೂಮಿಯನ್ನು ಅಗೆದು ಮಣ್ಣು ಸಾಗಾಣಿಕೆ ಮಾಡುತ್ತಿದ್ದು ಇದರಿಂದ ಗರ್ಜೂರ ಬೀಟ ಅರಣ್ಯ ನಾಶವಾಗುತ್ತಿದೆ. ಜನರು ಹೇಳುವ ಪ್ರಕಾರ ಅರಣ್ಯ ರಕ್ಷಕನಿಗೆ ಮಾಮೂಲಿ ಕೊಡತೇವ್ರಿ ಎಂಬ ಉತ್ತರ ನೀಡುತ್ತಾರೆ.
ಬೈಲಹೊಂಗಲ ವಲಯ ವ್ಯಾಪ್ತಿಯ ಮುರಕಿಬಾಂವಿ ರಸ್ತೆ, ದೇವಲಾಪೂರ ರಸ್ಚೆ ಮಲಪ್ರಭಾ ನದಿಯ ವರೆಗೆ, ಯರಡಾಲ ವೃತ್ತದಿಂದ ಆನಿಗೋಳ ರಸ್ತೆಯ ವರೆಗೆ, ಬೈಲಹೊಂಗಲದಿಂದ ಮುರಗೋಡ ಹಾಗೂ ಹೊಸೂರ ರಸ್ತೆ ವರೆಗೆ ಸುಮಾರು ಎರಡು ವರ್ಷಗಳಲ್ಲಿ ಅಂದಾಜು 14 ಸಾವಿರ ಸಾಲು ಸಸಿಗಳನ್ನು ಅರಣ್ಯ ಇಲಾಖೆ ನೆಟ್ಟಿದ್ದು ಈ ಸಸಿಗಳಿಗೆ ಸರಿಯಾದ ನೀರು ಹಾಗೂ ಕಾವಲುಗಾರನಿಲ್ಲದೇ ಸಸಿಗಳು ನಾಶವಾಗುತ್ತಿದ್ದು ಅರಣ್ಯ ಇಲಾಖೆಯಿಂದ ಪರಿಸರ ರಕ್ಷಣೆಯಾಗದಿರುವುದು ಕಂಡು ಬರುತ್ತಿದೆ. ಅರಣ್ಯ ಇಲಾಖೆಯಲ್ಲಿ ದಾಖಲಾತಿ ಇಲ್ಲದೇ ಕಟ್ಟಿಗೆ ಸಾಗಾಣಿಕೆಗಳು ನಿರಂತರವಾಗಿ ನಡೆಯುತ್ತಿದ್ದು ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಅರಣ್ಯ ರಕ್ಷಕನ ಮೇಲೆ ನಿಗಾ ಇಡದೇ ಇಂತಹ ಕಾನೂನು ಬಾಹಿರ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎನ್ನಲಾಗಿದೆ. ಅರಣ್ಯ ಇಲಾಖೆಯ ಕಛೇರಿಯ ಆವರಣದಲ್ಲಿ ಅರಣ್ಯ ರಕ್ಷಕನಿಗೆ ತಂಗಲು ವಸತಿ ನಿಲಯದಲ್ಲಿಯೇ ವಾಸಿಸಲು ನಿರ್ದೇಶನ ಇದ್ದರು ಸದಾ ವಸತಿ ನಿಲಯಕ್ಕೆ ಬೀಗ ಜಡಿದಿರುತ್ತಾರೆ. ಅರಣ್ಯ ರಕ್ಷಕ ಆಗೊಮ್ಮೆ ಈಗೊಮ್ಮೆ ಕಾಣಸಿಗುತ್ತಾರೆ. ಅವರು ಬೇರೆ ತಾಲೂಕಿನವರು ಸರಿಯಾಗಿ ಕರ್ತವ್ಯ ನಿರ್ವಹಿಸದೇ ಕಟ್ಟಿಗೆ ಕೊರೆಯುವ ಸಾ ಮಿಲ್, ಕಟ್ಟಿಗೆ ಅಡ್ಡೆಗಳಿಗೆ ಪ್ರತಿ ತಿಂಗಳು ತೆರಳಿ ಮಾಮೂಲಿ ವಸೂಲಿ ಮಾಡುತ್ತಾರೆ ಎಂಬ ಅರೋಪವು ಕೇಳಿ ಬರುತ್ತಿದೆ.
ಇಷ್ಟೇಲ್ಲ ಆವಾಂತರಗಳು ನಡೆದರು ಅರಣ್ಯಾಧಿಕಾರಿಗಳು ಸರ್ಕಾರಿ ಸಂಭಳ ಪಡೆದು ಅರಣ್ಯ ರಕ್ಷಣೆಗೆ ದಿವ್ಯ ನಿರ್ಲಕ್ಷ್ಯ ತಾಳುತ್ತಿರುವದನ್ನು ಪ್ರಕೃತಿ ನಿರ್ಸಗವೇ ಶಿಕ್ಷೆ ನೀಡಲಿ ಎಂದು ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.