ಬೈಲಹೊಂಗಲ

ಜೀವ ರಕ್ಷಣೆಗೆ ಸಂಚಾರಿ ನಿಯಮಗಳನ್ನು ಪಾಲಿಸಿ

ಜೀವ ರಕ್ಷಣೆಗೆ ಸಂಚಾರಿ ನಿಯಮಗಳನ್ನು ಪಾಲಿಸಿ

ಕಾಡಾ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ ಸಲಹೆ: ಬೃಹತ್ ಸಂಚಾರಿ ಸುರಕ್ಷತಾ ಮೇಳ

ಬೈಲಹೊಂಗಲ 22: ಪ್ರತಿಯೊಬ್ಬರು ಸಂಚಾರಿ ನಿಯಮಗಳನ್ನು ಪಾಲಿಸಿ, ತಾಳ್ಮೆಯಿಂದ ವಾಹನ ಚಾಲನೆ ಮಾಡುವ ಮೂಲಕ ಅಮೂಲ್ಯ ಜೀವ ಉಳಿಸಿಕೊಳ್ಳಬೇಕೆಂದು ಬೆಳಗಾವಿ ಕಾಡಾ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ ಹೇಳಿದರು. 

ಸೋಮವಾರ ಪಟ್ಟಣದ ಪುರಸಭೆ ಶೂರ ಸಂಗೊಳ್ಳಿ ರಾಯಣ್ಣ ಪ್ರೌಢಶಾಲೆಯಲ್ಲಿ ಬೈಲಹೊಂಗಲ ಮತ್ತು ನೇಸರಗಿ ಪೆÇಲೀಸ್ ಠಾಣೆ ಆಶ್ರಯದಲ್ಲಿ 32ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಯ-2021 ರ ನಿಮಿತ್ತ ಬೃಹತ್ ಸಂಚಾರಿ ಸುರಕ್ಷತಾ ಮೇಳ ಕಾರ್ಯಕ್ರಮದಲ್ಲಿ ಸಸಿಗೆ ನೀರು ಹಾಕುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿ, ವಾಹನ ಚಲಾಯಿಸುವ ಮುನ್ನ ಕಾನೂನು ಪಾಲನೆ ಮುಖ್ಯ ಎಂಬುದನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕು. ಯುವಕರು ರಸ್ತೆ ನಿಯಮಗಳನ್ನು ಸರಿಯಾಗಿ ತಿಳಿದುಕೊಂಡು ವಾಹನ ಚಾಲನೆ ಮಾಡುವುದು ಸೂಕ್ತ.  ಕಾನೂನು ಉಲ್ಲಂಘನೆ ಆಗದಂತೆ ಪ್ರತಿಯೊಬ್ಬ ವಾಹನ ಚಾಲಕರೂ ಎಚ್ಚರವಹಿಸಬೇಕು. ದ್ವಿಚಕ್ರ ವಾಹನ ಚಾಲಕರು ಹೆಲ್ಮೇಟ್ ಧರಿಸದೇ ಅಪಘಾತಕ್ಕೊಳಗಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ವಾಹನ ಚಲಿಸುವಾಗ ಮೊಬೈಲ್ನಲ್ಲಿ ಮಾತನಾಡುತ್ತಿರುವ ಸಮಯದಲ್ಲಿ ಕೂಡಾ ಅಪಘಾತ ಸಂಭವಿಸಬಹುದೆಂದರು.  

ಡಿವೈಎಸ್ಪಿ ಶಿವಾನಂದ ಕಟಗಿ ಮಾತನಾಡಿ, ರಸ್ತೆ ಸುರಕ್ಷತೆಯಲ್ಲಿ ಚಾಲಕನ ಕರ್ತವ್ಯ ಬಹಳ ಮುಖ್ಯವಾಗಿದೆ. ವಾಹನ ಸವಾರರು ಕಡ್ಡಾಯವಾಗಿ ಸಂಚಾರಿ ಚಿಹ್ನೆಗಳ ಪಾಲನೆ ಮಾಡಬೇಕು. ಚಾಲನಾ ಪರವಾನಗಿ ಇಲ್ಲದೆ ವಾಹನ ಚಲಾಯಿಸಬಾರದು. ಸಂಚಾರಿ ಚಿಹ್ನೆಗಳು, ಸಂಕೇತಗಳು, ನಿಯಮ ತಿಳಿದು ಇವುಗಳನ್ನು ತಪ್ಪದೇ ಪಾಲಿಸಬೇಕು. ವಿದ್ಯಾರ್ಥಿಗಳು ತಮ್ಮ ಸುಂದರವಾದ ಭವಿಷ್ಯ ನಿರ್ಮಾಣಕ್ಕೆ ಹೆಚ್ಚಿನ ಕಾಳಜಿ ವಹಿಸಬೇಕು. ತಂದೆ-ತಾಯಿಗಳ ಪರಿಶ್ರಮ ಜೀವನವನ್ನು ನೆನಪಿಟ್ಟುಕೊಂಡು ವಿದ್ಯಾರ್ಥಿಗಳು ತಮ್ಮ ಸುರಕ್ಷತೆ ಕಡೆಗೆ ಗಮನ ಹರಿಸಬೇಕೆಂದರು. ಪೋಲೀಸ್ ಇಲಾಖೆಯಿಂದ ಪ್ರತಿ ಮೂರು ತಿಂಗಳಿಗೊಮ್ಮೆ ಸಂಚಾರಿ ಸುರಕ್ಷತಾ ಮೇಳ ಹಮ್ಮಿಕೊಳ್ಳಲಾಗುವುದೆಂದರು. 

ಸಿಪಿಐ ಯು.ಎಚ್.ಸಾತೇನಹಳ್ಳಿ ಮಾತನಾಡಿ, ಸಂಚಾರ ನಿಯಮ ಪಾಲನೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಅಡ್ಡಾದಿಡ್ಡಿ ವಾಹನ ನಿಲ್ಲಿಸುವುದು, ಮದ್ಯಪಾನ ಮಾಡಿ ವಾಹನ ಚಲಾಯಿಸುವುದು, ಚಾಲನೆ ವೇಳೆ ಮೊಬೈಲ್ ಬಳಕೆ ಮುಂತಾದ ಪ್ರವೃತ್ತಿಗಳನ್ನು ಬಿಡಬೇಕು. ಇವುಗಳು ಅಪಘಾತಕ್ಕೆ ಕಾರಣವಾಗುತ್ತವೆ. ವಾಹನ ಸವಾರರ ಸುರಕ್ಷತೆ ಸಲುವಾಗಿ ಪೆÇಲೀಸ್ ಇಲಾಖೆಯಿಂದ ಇನ್ಸೂರೆನ್ಸ್, ವಾಹನ ಚಾಲನಾ ಪ್ರಮಾಣ ಪತ್ರ, ವಾಯು ಮಾಲಿನ್ಯ ಪ್ರಮಾಣ ಪತ್ರ, ಕಡಿಮೆ ದರದಲ್ಲಿ ಹೆಲ್ಮೇಟ್, ವಾಹನ ಖರೀದಿಸಲು ಬ್ಯಾಂಕ್ ಲೋನ್ ಸೌಲಭ್ಯ ಒದಗಿಸಲಾಗಿದೆ ಎಂದರು. 

ಈ ಸಂದರ್ಭದಲ್ಲಿ ಸಾಮಾಜಿ ಕಾರ್ಯಕರ್ತ ರಫೀಕ ಬಡೇಘರ, ಪತ್ರಕರ್ತರ ಸಂಘದ ಅಧ್ಯಕ್ಷ ಮಹಾಂತೇಶ ತುರಮರಿ, ಕಾಲೇಜು ವಿದ್ಯಾರ್ಥಿಗಳು, ನಾಗರಿಕರು, ಚಾಲಕರು, ಪೆÇಲೀಸರು ಉಪಸ್ಥಿತರಿದ್ದರು. ಇದೇ ವೇಳೆ ಅಂಗವೀಕಲರಿಗೆ ಉಚಿತ ಹೆಲ್ಮೇಟ್ ವಿತರಿಸಲಾಯಿತು. ಸುಮಾರು 700 ಕ್ಕೂ ಹೆಚ್ಚು ಗ್ರಾಹಕರು ಇದರ ಲಾಭ ಪಡೆದರು.


ಸುದ್ದಿ ಓದಿ