ಹಬ್ಬದ ಸಮಯದಲ್ಲಿ ಸರ್ಕಾರದ ನಿಯಮ ಪಾಲಿಸಿ; ಶಾಂತಿ ಕಾಪಾಡಿ: ಡಿವೈಎಸ್ಪಿ ಪ್ರಶಾಂತ ಮುನ್ನೋಳ್ಳಿ
ಕಾಗವಾಡದಲ್ಲಿ ಶಾಂತಿಪಾಲನಾ ಸಭೆ;
ಕಾಗವಾಡ 19: ಪಟ್ಟಣದಲ್ಲಿ ಡಿವೈಎಸ್ಪಿ ಪ್ರಶಾಂತ ಮುನ್ನೋಳಿ, ಅಥಣಿ ಸಿಪಿಐ ಸಂತೋಷ ಹಳ್ಳೂರ ಹಾಗೂ ಪಿಎಸ್ಐ ರಾಘವೇಂದ್ರ ಖೋತ ನೇತೃತ್ವದಲ್ಲಿ ತಾಲೂಕಿನ 352 ಸಾರ್ವಜನಿಕ ಗಣೇಶ ಮಂಡಳಗಳು ಹಾಗೂ ಹಿಂದೂ-ಮುಸ್ಲಿಂ ಮುಖಂಡರು, ಗ್ರಾಮಸ್ಥರ ಜೊತೆಗೆ ಗಣೇಶ ಚತುರ್ಥಿ, ಹಾಗೂ ಈದ್ ಮಿಲಾದ್ ಹಬ್ಬದ ಶಾಂತಿ ಪಾಲನಾ ಸಭೆಯು ಸೋಮವಾರ ದಿ. 18 ರಂದು ಸಂಜೆ ಸಂಪನ್ನಗೊಂಡಿತು.
ಮಲ್ಲಿಕಾರ್ಜುನ ವಿದ್ಯಾಲಯದ ಸಭಾಭವನದಲ್ಲಿ ನಡೆದ ಶಾಂತಿ ಪಾಲನಾ ಸಭೆಯಲ್ಲಿ ಡಿವೈಎಸ್ಪಿ ಪ್ರಶಾಂತ ಮುನ್ನೋಳಿ ಮಾತನಾಡಿ, ಕಾನೂನು ನಿಯಮ ಪಾಲನೆ ಮಾಡುವ ಮೂಲಕ ಹಬ್ಬಗಳನ್ನು ಆಚರಣೆ ಮಾಡಬೇಕು. ಪ್ರತಿ ಗಣೇಶ ಪೆಂಡಾಲಗಳ ಒಳಗೆ ಮತ್ತು ಹೊರಗೆ ಸಿಸಿ ಕ್ಯಾಮಾರಾ ಅಳವಡಿಸಬೇಕು. ಸಾರ್ವಜನಿಕ ಮಂಡಳಗಳು ಆಯಾ ಗ್ರಾಮ ಪಂಚಾಯತಿಗಳ ಪರವಾನಿಗೆ ಪಡೆದುಕೊಂಡು, ಹೆಸ್ಮಾಂ, ಪೋಲಿಸ್ ಇಲಾಖೆಯ ಅನುಮತಿಗಾಗಿ ಕಾಗವಾಡ ಪೋಲಿಸ್ ಠಾಣೆಯನ್ನು ಸಂಪರ್ಕಿಸಿ, ಅನುಮತಿ ಪಡೆದುಕೊಳ್ಳಬೇಕು. ಮತ್ತು ಪ್ರತಿ ಮಂಡಳಗಳ 10 ಜನ ಸದಸ್ಯರ ಹೆಸರು, ಮೊಬೈಲ್ ನಂಬರನೊಂದಿಗೆ ಮಾಹಿತಿಯನ್ನು ಒದಗಿಸಬೇಕು. ಕಾಗವಾಡ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ 352 ಗಣೇಶ ಮಂಡಳಗಳಿದ್ದು, ಪ್ರತಿ ಮಂಡಳಗಳಿಗೂ ಪೋಲಿಸ್ ಸಿಬ್ಬಂದಿ ನೇಮಿಸುವುದು ಸಾಧ್ಯವಾಗುವುದಿಲ್ಲ. ಆದ್ದರಿಂದ ಮಂಡಳದ ಸದಸ್ಯರು ಯಾವುದೇ ಅಹಿತಕರ ಘಟನೆ ನಡೆಯದಂತೆ ಪೋಲಿಸ್ ಸಿಬ್ಬಂದಿಯೊಂದಿಗೆ ಸಹಕಾರ ನೀಡಬೇಕು.
ಪಿಎಸ್ಐ ರಾಘವೇಂದ್ರ ಖೋತ ಮಾತನಾಡಿ, ಪ್ರತಿ ಮಂಡಳಿಯ ವಾಟ್ಸಪ್ ಗುಂಪು ಮಾಡಿ, ಪೋಲಿಸ್ ಇಲಾಖೆಯಿಂದ ಬರುವ ಸುತ್ತೋಲೆ ಪಾಲನೆ ಮಾಡುತ್ತ ಒಟ್ಟಾಗಿ ಸಹಕಾರದಿಂದ ಶಾಂತಿ ಸುವ್ಯವಸ್ಥೆ ರೀತಿಯಲ್ಲಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬ ಆಚರಿಸಲು ಸಹಕರಿಸಬೇಕು. ದಿ.20 ರಿಂದ ಪೋಲಿಸ್ ಠಾಣೆಯಲ್ಲಿ ಪರವಾನಿಗೆ ನೀಡಲು ಚಾಲನೆ ನೀಡಲಾಗುವುದು. ಗಣೇಶನ ವಿಸರ್ಜನೆ ಸಮಯದಲ್ಲಿ ಕರ್ಕಷ ಶಬ್ದ ಮಾಡುವ ಡಿಜೆ, ಡಾಲ್ಬಿಗಳನ್ನು ಹಚ್ಚುವುದನ್ನು ಸರ್ಕಾರ ಸಂಪೂರ್ಣ ನಿಷೇದಿಸಿದೆ. ಸಾಂಪ್ರದಾಯಿಕ ವಾದ್ಯಗಳನ್ನು ಬಳಸಿಕೊಳ್ಳಬಹುದು. ಮದ್ಯ ಸೇವನೆ ಮಾಡಿ, ಗಲಭೆಗೆ ಅವಕಾಶ ಮಾಡುವಂತವರ ಮೇಲೆ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ಭಾವೈಕ್ಯತೆಯಿಂದ ಎರಡೂ ಹಬ್ಬಗಳನ್ನು ಆಚರಿಸಲು ಇಲಾಖೆ ಜೊತೆಗೆ ಸಹಕರಿಸಬೇಕೆಂದರು.
ಮುಖಂಡರಾದ ಶಿವಾನಂದ ನವಿನಾಳೆ ಮಾತನಾಡಿ, ಜಿಲ್ಲೆಯಾದ್ಯಾಂತ ಡಾಲ್ಬಿಗೆ ಅವಕಾಶ ನೀಡದಿರುವುದನ್ನು ನಾವು ಸ್ವಾಗತಿಸುತ್ತೇವೆ. ಆದರೇ ಕಳೆದ ವರ್ಷ ಅಥಣಿ, ಚಿಕ್ಕೋಡಿ ಸೇರಿದಂತೆ ಅನೇಕ ಕಡೆ ಡಾಲ್ಬಿಗೆ ಅವಕಾಶ ನೀಡಿ, ನಮಲ್ಲಿ ಮಾತ್ರ ಅವಕಾಶ ನೀಡಿಲ್ಲ. ಈ ರೀತಿ ಆಗಬಾರದು. ಜಿಲ್ಲೆಯಾದ್ಯಾಂತ ಡಾಲ್ಬಿಗೆ ನಿಷೇಧ ಮಾಡಿ, ರಾಜಕೀಯ ಒತ್ತಡದಿಂದಾಗಿ ತಾರತಮ್ಯ ಮಾಡಬೇಡಿ ಎಂದರು.
ಈ ವೇಳೆ ತಹಶೀಲ್ದಾರ ರವೀಂದ್ರ ಹಾದಿಮನಿ, ಡಿವೈಎಸ್ಪಿ ಪ್ರಶಾಂತ ಮುನ್ನೋಳ್ಳಿ, ಸಿಪಿಐ ಸಂತೋಶ ಹಳ್ಳೂರ, ಪಿಎಸ್ಐ ರಾಘವೇಂದ್ರ ಖೋತ, ಅಪರಾಧ ವಿಭಾಗದ ಪಿಎಸ್ಐ ಎಂ.ಆರ್. ಆಳಂದ, ಎಎಸ್ಐ ಎಲ್.ಎನ್. ಕುಂಬಾರೆ, ಮುಖಂಡರಾದ ಕಾಕಾ ಪಾಟೀಲ, ಶಿವಾನಂದ ನವಿನಾಳೆ, ವಿನಾಯಕ ಚೌಗುಲೆ, ಸಚೀನ ಕವಟಗಿ, ಪ್ರಕಾಶ ಚೌಗುಲೆ, ಪೋಲಿಸ್ ಸಿಬ್ಬಂದಿಗಳಾದ ವಿಜಯ ನರಗಟ್ಟಿ, ಸುರೇಶ ನಂದಿವಾಲೆ, ಎಸ್.ಡಿ. ದೇವಋಷಿ ಸೇರಿದಂತೆ ಗಣೇಶ ಮಂಡಳದ ಸದಸ್ಯರು, ತಾಲೂಕಿನ ಮುಖಂಡರು, ಸಾರ್ವಜನಿಕ ಗಣೇಶ ಮಂಡಳಗಳ ಪದಾಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.