ಲತೇಹಾರ್ನಲ್ಲಿ ಸರಕು ರೈಲು ಹರಿದು ಐದು ಜಿಂಕೆಗಳು ಸಾವು
ಲತೇಹಾರ್, ಆಗಸ್ಟ್ 31: ಜಾರ್ಖಂಡ್ ನ ಬೆಟ್ಲಾ ರಾಷ್ಟ್ರೀಯ ಉದ್ಯಾನದ ಕೆಚಾಕಿ ರೈಲ್ವೆ ನಿಲ್ದಾಣದ ಬಳಿ ವೇಗವಾಗಿ ಚಲಿಸುತ್ತಿದ್ದ ರೈಲು ಹರಿದು ಐದು ಜಿಂಕೆಗಳು ಸಾವನ್ನಪ್ಪಿರುವ ಘಟನೆ ಸೋಮವಾರ ನಡೆದಿದೆ.
ಸೋಮವಾರ ಮುಂಜಾನೆ ಘಟನೆಯ ಬಗ್ಗೆ ಗ್ರಾಮಸ್ಥರಿಂದ ಮಾಹಿತಿ ದೊರೆತಿದ್ದು, ತಕ್ಷಣವೇ ಅರಣ್ಯ ಇಲಾಖೆಯ ತಂಡವನ್ನು ಸ್ಥಳಕ್ಕೆ ಕಳುಹಿಸಲಾಯಿತು. ಐದು ಜಿಂಕೆಗಳ ಮೃತದೇಹಗಳನ್ನು ಬೆಟ್ಲಾ ವಲಯ ಅರಣ್ಯ ಕಚೇರಿಗೆ ತರಲಾಯಿತು ಎಂದು ಬೆಟ್ಲಾ ವಲಯ ಅರಣ್ಯಾಧಿಕಾರಿ ಪ್ರೇಮ್ ಪ್ರಸಾದ್ ತಿಳಿಸಿದ್ದಾರೆ.
ವಲಯ ಅರಣ್ಯ ಕಚೇರಿಯಲ್ಲಿ ಜಿಂಕೆಗಳ ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಿದ ನಂತರ, ಅವನ್ನು ಮಣ್ಣಿನಲ್ಲಿ ಹೂಳಲಾಯಿತು. ಆಹಾರ ಹುಡುಕಿಕೊಂಡು ಜಿಂಕೆಗಳು ಉದ್ಯಾನದಿಂದ ಗ್ರಾಮಕ್ಕೆ ಬಂದಿದ್ದು, ನಂತರ ಉದ್ಯಾನಕ್ಕೆ ವಾಪಸ್ಸಾಗುವಾಗ ರೈಲ್ವೆ ಹಳಿಯಲ್ಲಿ ವೇಗದ ಸರಕು ರೈಲಿಗೆ ಸಿಲುಕಿ ಸಾವನ್ನಪ್ಪಿವೆ ಎಂದು ಅವರು ಹೇಳಿದ್ದಾರೆ.