ಉತ್ತರ ಕರ್ನಾಟಕ ಹೆಬ್ಬಾಗಿಲಿಗೆ ಹೆಚ್.ಡಿ.ಕುಮಾರಸ್ವಾಮಿ; ರೈತರಿಂದ ಅಭಿನಂದನಾ ಸನ್ಮಾನ
ರಾಣೇಬೆನ್ನೂರು 08: ಈ ರಾಜ್ಯದ ಮುಖ್ಯಮಂತ್ರಿಯಾಗಿ ಅಂದು ಅತ್ಯುತ್ತಮ ಕಾರ್ಯ ನಿರ್ವಹಿಸಿ ರೈತರ ಸಾಲ ಮನ್ನಾದ ರೂವಾರಿ ಎನ್ನುವ ಹೆಸರು ಪಡೆದಿದ್ದ ಹೆಚ್.ಡಿ.ಕುಮಾರಸ್ವಾಮಿ ಅವರು ಶನಿವಾರ ಉತ್ತರ ಕರ್ನಾಟಕದ ಹೆಬ್ಬಾಗಿಲಿನ ಹರಿಹರದ ತುಂಗಭದ್ರಾ ಜಲಧಾರೆ ಕಾರ್ಯಕ್ರಮಕ್ಕೆ ಚಾಲನೆ ನೀಡಲು ದಾವಿಸಿದ್ದರು. ಅವರ ಆಗಮನವನ್ನು ಗಮನಿಸಿದ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಮುಖಂಡರು ಕಾರ್ಯಕರ್ತರು ಅವರನ್ನು ಭೇಟಿ ಮಾಡಿ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನಾ ಕಾರ್ಯದರ್ಶಿ ರವೀಂದ್ರಗೌಡ ಪಾಟೀಲ, ಜಿಲ್ಲಾಧ್ಯಕ್ಷ ಈರಣ್ಣ ಹಲಗೇರಿ ಅವರು, ತಾವು ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ರೈತರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಯಂತೆ ರೈತರ ಸಾಲ ಮನ್ನಾ ಮಾಡಿದ ರೂವಾರಿಗಳು ತಾವಾಗಿದ್ದಿರಿ. ಜಲಧಾರೆ ಕಾರ್ಯಕ್ರಮದ ಮೂಲಕ ರಥಯಾತ್ರೆಯಲ್ಲಿ ಪಾಲ್ಗೊಂಡಿದ್ದು ಈ ನಾಡಿನ ರೈತರ ಆತ್ಮಸ್ಥೈರ್ಯವನ್ನು ಹೆಚ್ಚಿಸಿದಂತಾಗಿದೆ. ಪುನಃ ತಾವು ಈ ನಾಡಿನ ಮುಖ್ಯಮಂತ್ರಿಯಾಗಿ ರೈತರ ಸಂಕಷ್ಟವನ್ನು ನಿವಾರಿಸಲು ಮುಂದಾಗಬೇಕೆಂದು ಹೆಚ್.ಡಿ.ಕುಮಾರಸ್ವಾಮಿಯವರಲ್ಲಿ ಮನವಿ ಮಾಡಿದರು.
ಸರ್ಕಾರಕ್ಕೆ ಓಟಿಎಸ್ ಯೋಜನೆ ಜಾರಿಗೆ ತರಲು ಒತ್ತಾಯಿಸಿ ಕಳೆದ 45 ದಿವಸಗಳಿಂದ ಮಾಕನೂರು ಗ್ರಾಮದ ಯೂನಿಯನ್ ಬ್ಯಾಂಕ್ ಬಳಿ ಧರಣಿ, ಹೋರಾಟ ನಡೆಸಿದ್ದೇವೆ. ಆದರೆ, ಹೋರಾಟದ ತೀವ್ರತೆ ಹೆಚ್ಚಾದಾಗ ಮಾತ್ರ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ದಾವಿಸಿ ಅನೇಕ ಕಾರಣಗಳನ್ನು ನೀಡಿ ಸಮಸ್ಯೆ ಪರಿಹರಿಸುವ ಭರವಸೆ ನೀಡುತ್ತಾರೆ. ಆದರೆ, ಭರವಸೆ ಭರವಸೆಯಾಗಿಯೇ ಸಾಗಿದೆ. ತಾವುಗಳು ಈ ಕುರಿತು ಸರ್ಕಾರಕ್ಕೆ ಪತ್ರ ಬರೆದು ಪರಿಹಾರಕ್ಕೆ ಒತ್ತಾಯಿಸಲು ರೈತರು ಕುಮಾರಸ್ವಾಮಿಯವರಿಗೆ ಒಕ್ಕೊರಲ ಮನವಿ ಮಾಡಿದರು.
ಮನವಿ ಸಲ್ಲಿಕೆ ಮುಂಚೂಣಿಯಲ್ಲಿ ಹನುಮಂತಪ್ಪ ಕುಂಬಳೂರ, ಹರಿಹರಗೌಡ ಪಾಟೀಲ, ಗುಡ್ಡನಗೌಡ ಪಾಟೀಲ, ಅಶೋಕಗೌಡ ಗಂಗನಗೌಡ್ರ, ನಾಗರಾಜ ಸುರ್ವೆ, ಹುಸೇನಸಾಬ್ ದೊಡ್ಡಮನಿ ಸೇರಿದಂತೆ ಮತ್ತಿತರ ರೈತರು ಪಾಲ್ಗೊಂಡಿದ್ದರು.