ಉಪವಾಸ ಸತ್ಯಾಗ್ರಹ ಕೈಬಿಟ್ಟ ಶ್ರೀಗಳು
ರಾಣೆಬೆನ್ನೂರ 22: ತಾ:ನ ಆರೇಮಲ್ಲಾಪೂರ ಗ್ರಾಮದಲ್ಲಿ ಸೇವೆ ಸಲ್ಲಿಸುತ್ತಿರುವ ಗ್ರಾಪಂ ಅಭಿವೃದ್ಧಿ ಅಧಿಕಾರಿ ಡಿ.ಬಿ. ಹರಿಜನ ಅವರನ್ನು ಕೂಡಲೇ ಇಲ್ಲಿಂದ ವರ್ಗಾವಣೆ ಮಾಡಿ ಸೇವೆಯಿಂದ ವಜಾಗೊಳಿಸ ಬೇಕೆಂದು ಆಗ್ರಹಿಸಿ ಶ್ರೀಮಠ ದಲ್ಲಿ ಗ್ರಾಪಂ ಸದಸ್ಯ ಹಾಗೂ ಶರಣ ಬಸವೇಶ್ವರ ಮಠದ ಫೀಠಾಧಿಪತಿ ಪ್ರಣವಾನಂದರಾಮ ಸ್ವಾಮೀಜಿಯವರು ಕೈಗೊಂಡಿದ್ದ ಆಮರಣ ಉಪವಾಸ ಸತ್ಯಾಗ್ರಹ ವನ್ನು ಸಚಿವ ಆರ್ ಶಂಕರ ಮತ್ತು ಜಿಪಂ ಅಧಿಕಾರಿಗಳ ಭರವಸೆಯ ಮೇರೆಗೆ ಬುಧವಾರ ಅಂತ್ಯಗೊಳಿಸಲಾಯಿತು.
ಒಂದು ವಾರದೊಳಗೆ ಪಿಡಿಓ ಮೇಲೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಜಿಪಂ ಹೆಚ್ಚುವರಿ ಕಾರ್ಯದರ್ಶಿ ಜಾಫರ ಶರೀಪ ಸುತಾರ ಅವರು ನೀಡಿದ ಭರವಸೆ ಮೇರೆಗೆ ಸತ್ಯಾಗ್ರಹ ಅಂತ್ಯವಾಯಿತು. ಅವಧಿಯೊಳಗೆ ವರ್ಗಾವಣೆಯಾಗದಿದ್ದರೆ ಮತ್ತೆ ಸತ್ಯಾಗ್ರಹ ಕೈಗೊಳ್ಳುವುದಾಗಿ ಶ್ರೀಗಳು ಎಚ್ಚರಿಸಿದರು. ಸಿಪಿಐ ಶ್ರೀಶೈಲ ಚೌಗಲಾ, ತಾಪಂ ಎ.ಡಿ ಅಶೋಕ ನಾರಜ್ಜಿ, ವ್ಯವಸ್ಥಾಪಕ ಬಸವರಾಜ ಶಿಡೇನೂರ ಸೇರಿದಂತೆ ಮತ್ತಿತರರು ಶ್ರೀಗಳ ಮನವೊಲಿಸುವಲ್ಲಿ ಯಶಸ್ವಿಯಾದರು.