ಬಸವೇಶ್ವರ ಏತ ನೀರಾವರಿ ಯೋಜನೆ ಕಾಲುವೆ ಕಾಮಗಾರಿ ಪೂರ್ಣಗೊಳಿಸಲು ರೈತರ ಆಗ್ರಹ
ಮಲಾಬಾದ 18 : ಬಸವೇಶ್ವರ ಏತ ನೀರಾವರಿ ಯೋಜನೆಯ ಕಾಲುವೆ ಕಾಮಗಾರಿಯನ್ನು ತಕ್ಷಣ ಪೂರ್ಣಗೊಳಿಸಿ ಮಲಾಬಾದ, ಬಾಳಿಗೇರಿ, ಬೇವನೂರು ಹಾಗೂ ಗುಂಡೇವಾಡಿ ಗ್ರಾಮಗಳಿಗೆ ಕಾಲುವೆಗಳ ಮೂಲಕ ನೀರು ಪೂರೈಸಬೇಕು. ಕಾಲುವೆ ನಿರ್ಮಾಣಕ್ಕಾಗಿ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ರೈತ ಸಂಘಟನೆ ಹಾಗೂ ಚಿಂತಕರ ವೇದಿಕೆ ವತಿಯಿಂದ ಮಲಾಬಾದ ಗ್ರಾಮದಲ್ಲಿ ಪ್ರತಿಭಟನೆ ನಡೆಸಲಾಯಿತು. ಮಲಾಬಾದ-ಅಥಣಿ-ಡಪಳಾಪುರ ರಾಜ್ಯ ಹೆದ್ದಾರಿಯಲ್ಲಿ ಸಾಂಕೇತಿಕ ರಸ್ತೆ ತಡೆ ನಡೆಸಿದ ರೈತರು ಸರ್ಕಾರದ ಗಮನ ಸೆಳೆಯಲು ಪ್ರತಿಭಟನೆ ನಡೆಸಿದರು.
ಈ ವೇಳೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡದಿರುವುದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ವಿಠ್ಠಲ ದೇವಸ್ಥಾನದಲ್ಲಿ ಗ್ರಾಮಸ್ಥರು ಹಾಗೂ ರೈತ ಸಂಘಟನೆಗಳ ಸಭೆ ನಡೆಸಿ ವಿವಿಧ ವಿಷಯಗಳ ಕುರಿತು ಚರ್ಚಿಸಲಾಯಿತು. ಸರ್ಕಾರ ಈ ಬಗ್ಗೆ ಶೀಘ್ರ ಗಮನ ಹರಿಸದಿದ್ದರೆ ಮುಂದಿನ ದಿನಗಳಲ್ಲಿ ಬಲವಾದ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಲಾಯಿತು. ರೈತ ಸಂಘಟನೆಯ ಅಧ್ಯಕ್ಷ ಎಂ.ಸಿ. ತಾಂಬೋಳಿ ಮಾತನಾಡಿ, 2013ರಲ್ಲಿ ಕಾಮಗಾರಿ ಆರಂಭವಾಗಿದ್ದರೂ ಇದುವರೆಗೆ ಪೂರ್ಣಗೊಂಡಿಲ್ಲ. ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಯೋಜನೆಯ ಕಾಮಗಾರಿ ವಿಳಂಬವಾಗುತ್ತಿದ್ದು, ಕೇವಲ ಭರವಸೆಗಳು ಉಳಿದಿವೆ. ಯೋಜನೆಯ ನೀರು ಖೇಡಗಾಂವ್ವರೆಗೆ ತಲುಪಿದೆ.
ಆದರೆ ಮುಂದಿನ ಗ್ರಾಮಗಳಿಗೆ ಇನ್ನೂ ನೀರು ಬಂದಿಲ್ಲ. ಕಾಮಗಾರಿ ಅಪೂರ್ಣವಾಗಿರುವುದರಿಂದ ಸರ್ಕಾರ ಗಂಭೀರವಾಗಿ ಪರಿಗಣಿಸಿ ಶೀಘ್ರ ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ರೈತ ಸಂಘಟನೆ ಹಾಗೂ ಗ್ರಾಮಸ್ಥರು ಬೀದಿಗಿಳಿದು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. ರೈತ ಮುಖಂಡ ಪ್ರಕಾಶ ಪೂಜಾರಿ ಮಾತನಾಡಿ, ಗಡಿಭಾಗದ ರೈತರು ಸತತ ಬರಗಾಲದಿಂದ ಕಂಗೆಟ್ಟಿದ್ದಾರೆ.
13 ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಸರ್ಕಾರ ಕೂಡಲೇ ಗಮನಹರಿಸಿ ಅನುದಾನ ಬಿಡುಗಡೆ ಮಾಡಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಗ್ರಾಮದ ಪ್ರಮುಖರಾದ ಚನ್ನಪ್ಪ ಕುಲೋಳಿ, ಸೋಮಯ್ಯ ಹಿರೇಮಠ, ಕಾಕಾಸಾಹೇಬ ಚೌಗುಲೆ, ಬಾಬು ಜತ್ತಿ, ಡಿ.ಎಂ. ನಾಯಕ್, ಲಕ್ಷ್ಮಣ ಕೋಳಿ, ಮಲ್ಲಪ್ಪ ಕುಲೋಳಿ, ಮುರುಗೇಂದ್ರ ಪಾಟೀಲ ಸೇರಿದಂತೆ ಹಲವರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಉಪಸ್ಥಿತರಿದ್ದರು.