ತಾಲೂಕಾ ಒಕ್ಕಲೂತನ ಹುಟ್ಟುವಳಿ ಮಾರಾಟ, ರೂಪಾಂತರ: ರೈತರ ತರಬೇತಿ ಕಾರ್ಯಾಗಾರ
ರಾಣಿಬೆನ್ನೂರ 24: ಈ ಹಿಂದೆ ರಸಗೊಬ್ಬರಕ್ಕಾಗಿ ರೈತರ ಪ್ರತಿಭಟನೆ ವೇಳೆ ಗೋಲಿಬಾರ ನಡೆದು ಇತಿಹಾಸದಲ್ಲಿ ಅಚ್ಚಳಿಯದೆ ಉಳಿದಿದೆ. ಇದರ ನಿರ್ಮೂಲನೆಗಾಗಿ ನನ್ನ ಅವಧಿಯಲ್ಲಿ ಸಾಕಷ್ಟು ಶ್ರಮಿಸಿರುವೆ ಎಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಮಂಜುನಾಥ ಬಿ ಹೇಳಿದರು.
ಅವರು ಮಂಗಳವಾರ ಸಂಜೆ ಇಲ್ಲಿನ ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಹಾಗೂ ರೂಪಾಂತರ ಸಹಕಾರಿ ಸಂಘ ವತಿಯಿಂದ ಕುರಿತು ಸಮರ್ಪಕ ವಹಿವಾಟಿನಲ್ಲಿ ಸಹಕಾರಿ ಸಂಘಗಳ ಪಾತ್ರ ಕುರಿತು ಏರ್ಪಡಿಸಿದ್ದ ರೈತರ ಹಾಗೂ ಕೃಷಿಪತ್ತಿನ ಸಹಕಾರಿ ಸಂಘಗಳ ಅಧ್ಯಕ್ಷರು ಹಾಗೂ ಕಾರ್ಯ ನಿರ್ವಾಹಕ ಅಧಿಕಾರಿಗಳ ಮತ್ತು ರೈತರ ತರಬೇತಿ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.
25 ವರ್ಷಗಳ ಹಿಂದೆ ಮಳೆಯ ಆಗಮನ ನೋಡಿದಾಗ ಮಳೆಯ ಪ್ರಮಾಣ ಕಡಿಮೆ ಇತ್ತು. ಪ್ರಸ್ತುತ 5 ವರ್ಷಗಳಿಂದೀಚೆಗೆ ಮಳೆಯ ಪ್ರಮಾಣ ಹೆಚ್ಚಾಗಿರುವುದರಿಂದ ರಸಗೊಬ್ಬರಗಳ ಕೊರತೆ ಉಂಟಾಗುವದು ಸಹಜವಾಗಿದೆ. ರಸಗೊಬ್ಬರಗಳ ಪೂರೈಕೆಯಲ್ಲಿ ಸರ್ಕಾರವು ಬೆಳೆಯ ಅನುಗುಣಕ್ಕಾಗಿ ದಾಸ್ತಾನು ಮಾಡುತ್ತಿದೆ. ಆದರೂ ಸಹ ಕೆಲವೊಂದು ರಸಾಯನಿಕ ಮಾರಾಟಗಾರರು ಅಭಾವ ಸೃಷ್ಟಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ತಾಲೂಕಿನ ಎಲ್ಲ ಕೃಷಿ ಪತ್ತಿನ ಸಹಕಾರಿ ಸಂಘಗಳ ಮೂಲಕ ರಸಗೊಬ್ಬರವನ್ನು ವಿತರಿಸುವುದರಿಂದ ಅಭಾವ ಕಂಡುಬಾರದನ್ನು ಮನಗಂಡು ಪ್ರಸ್ತುತ ಒಕ್ಕಲುತನ ಹುಟ್ಟುವಳಿ ಮಾರಾಟ ಹಾಗೂ ರೂಪಾಂತರ ಸಹಕಾರಿ ಸಂಘದ ಮೂಲಕ ವಿತರಿಸಲು ಮುಂದಾಗುವುದು ಅಗತ್ಯವೆನಿಸಿದೆ ಎಂದರು.
ಕೃಷಿ ಪತ್ತಿನ ಸಹಕಾರಿ ಸಂಘಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಆಡಳಿತ ಮಂಡಳಿಯವರು ಮುಂಗಡವಾಗಿ ರಸಗೊಬ್ಬರ ದಾಸ್ತಾನು ಮಾಡಿಕೊಂಡು ಸ್ಥಳೀಯ ರೈತರುಗಳಿಗೆ ವಿತರಣೆ ಮಾಡಿದಲ್ಲಿ ಇಂತಹ ಅಭಾವ ಕಂಡು ಬರುವದಿಲ್ಲ. ಹಿರೇಕೇರೂರು ತಾಲೂಕಿಗೆ ರಸಗೊಬ್ಬರ ಹೆಚ್ಚನ ಪ್ರಮಾಣದಲ್ಲಿ ಸರಬರಾಜು ಆಗುತ್ತಿವೆ ಎಂಬ ದೂರು ಬಂದ ಕಾರಣ ಅಲ್ಲಿಗೆ ತೆರಳಿ ಪರಿಶೀಲನೆ ನಡೆಸಿದಾಗ ಅಲ್ಲಿನ ಒಕ್ಕಲುತನ ಹುಟ್ಟುವಳಿ ಮಾರಾಟ ಹಾಗೂ ರೂಪಾಂತರ ಸಹಕಾರಿ ಸಂಘದ ಆಡಳಿತ ಮಂಡಳಿಯು ಮಳೆಗಾಲ ಆರಂಭವಾಗುವ 3 ತಿಂಗಳ ಮುಂಗಡವಾಗಿ ತಾಲೂಕಿಗೆ ಬೇಕಾಗುವ ರಸಗೊಬ್ಬರಗಳನ್ನು ದಾಸ್ತಾನು ಮಾಡಿಕೊಳ್ಳುವದು ಕಂಡು ಬಂದಿತು. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ತಾಲೂಕು ಕೃಷಿ ಪತ್ತಿನ ಸಹಕಾರಿ ಸಂಘಗಳ ಮೂಲಕ ವಿತರಿಸಲು ಮುಂದಾಗಿರುವದರಿಂದ ಇನ್ನು ಮುಂದೆ ಈ ಹಿಂದೆ ಆದಂತಹ ಅವಘಡನೆಗಳಾಗಲಿ ಅಥವಾ ರಸಗೊಬ್ಬರಗಳ ಅಭಾವವಾಗಲೀ ಸೃಷ್ಠಿಯಾವುದಿಲ್ಲ ಎಂದು ಕೃಷಿಪತ್ತಿನ ಸಹಕಾರಿ ಸಂಘದ ಕಾರ್ಯನಿರ್ವಾಹಕರುಗಳಿಗೆ ಮತ್ತು ಆಡಳಿತ ಮಂಡಳಿಯವರಿಗೆ ಮಂಜುನಾಥ.ಬಿ ಮನವರಿಕೆ ಮಾಡಿಕೊಟ್ಟರು.
ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಹಾಗೂ ರೂಪಾಂತರ ಸಹಕಾರಿ ಸಂಘದ ಅಧ್ಯಕ್ಷ ಯಲ್ಲರಡ್ಡಿ ರಡ್ಡೇರ ಅಧ್ಯಕ್ಷತೆ ವಹಿಸಿದ್ದರು. ಉಪ ಕೃಷಿ ನಿರ್ದೇಶಕಿ ಸ್ಪೂರ್ತಿ ಜಿ.ಎಸ್, ಸಹಾಯಕ ಕೃಷಿ ನಿರ್ದೇಶಕ ಹಿತೇಂದ್ರ ಗೌಡಪ್ಪಳವರ, ಇಪ್ಕೊ ಕಂಪನಿ ಕ್ಷೇತ್ರಾಧಿಕಾರಿ ನಾಗರಾಜ ಕರಿಗಾರ, ಕ್ಷೇತ್ರಾಧಿಕಾರಿ ಕುಮಾರಸ್ವಾಮಿ, ಸ್ಪಿಕ್ ಕಂಪನಿಯ ಕ್ಷೇತ್ರಾಧಿಕಾರಿ ನೆಗಳೂರ, ಫ್ಯಾಕ್ಟ್ ಕಂಪನಿಯ ಕ್ಷೇತ್ರಾಧಿಕಾರಿ ವಿನಾಯಕ ಅಂಗಡಿ, ಸಹಕಾರಿ ಸಂಘದ ಉಪನಿಬಂಧಕ ಯಲ್ಲಪ್ಪ ಹೊಸೂರ, ಸಹಾಯಕ ನಿಬಂಧಕ ದಾನಯ್ಯ ಹಿರೇಮಠ, ಸಹಕಾರಿ ಅಭಿವೃದ್ಧಿ ಅಧಿಕಾರಿ ವಿಕ್ರಮ ಕುಲಕರ್ಣಿ, ಕೃಷಿ ಅಧಿಕಾರಿ ಜಿ.ಎಂ.ಬತ್ತಿಕೊಪ್ಪದ ಹಾಗೂ ಕೃಷಿ ಪತ್ತಿನ ಸಹಕಾರಿ ಸಂಘಗಳ ಅಧ್ಯಕ್ಷರು ಮತ್ತು ಕಾರ್ಯನಿರ್ವಾಹಕಾಧಿಕಾರಿಗಳು ಕಾರ್ಯಗಾರದಲ್ಲಿ ಉಪಸ್ಥಿತರಿದ್ದರು.