ರೈತ ಕ್ಷೇತ್ರ ಪಾಠಶಾಲೆ: ಕಾಂಡ ಕೊರಕ ಬಾಧೆ ಹತೋಟಿಗೆ ಸಲಹೆ
ರಾಣಿಬೆನ್ನೂರ 17: ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ಹಾಗೂ ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳ ತಂಡ ಬ್ಯಾಡಗಿ ತಾಲ್ಲೂಕಿನ ಕದರಮಂಡಲಗಿ ಗ್ರಾಮದ ಪ್ರಗತಿಪರ ರೈತ ಮಂಜಪ್ಪ ಹಳ್ಳಳ್ಳಿ ಅವರ ಹತ್ತಿ ಬೆಳೆಯ ಪ್ರಾತ್ಯಕ್ಷಿಕೆ ಮತ್ತು ರೈತ ಕ್ಷೇತ್ರ ಪಾಠಶಾಲೆ ತಾಕಿಗೆ ಭೇಟಿ ನೀಡಿ ಪರೀಶೀಲನೆ ನಡೆಸಿದರು.
ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ. ಪಿ. ಎಸ್. ಹೂಗಾರ ಮಾತನಾಡಿ, ಹತ್ತಿಯಲ್ಲಿ ಕಂಡು ಬಂದ ಸುರಳಿ ಪೂಚಿ ಹಾಗೂ ಕಾಂಡ ಕೊರಕ ಬಾಧೆ ಹತೋಟಿಗೆ ಸೂಕ್ತ ಸಲಹೆ ಹಾಗೂ ಕ್ಷೇತ್ರ ಪಾಠಶಾಲೆಯಲ್ಲಿ ಕೈಗೊಳ್ಳಬೇಕಾದ ವಿವಿಧ ತರಗತಿ ಮತ್ತು ಮಿತ್ರ ಕೀಟಗಳ ಕುರಿತು ಮಾಹಿತಿ ನೀಡಿದರು.
ಬೀಜದಿಂದ ಹಿಡಿದು ಹತ್ತಿ ಮಾರಾಟದ ವರೆಗೆ ಕೃಷಿ ವಿಜ್ಞಾನ ಕೇಂದ್ರ, ಹನುಮನಮಟ್ಟಿಯ ವಿಜ್ಞಾನಿಗಳು ಸಂಪೂರ್ಣ ಮಾಹಿತಿಯನ್ನು ನಿಮಗೆ ನೀಡುವರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಕೀಟ ಹತೋಟಿಗೆ ಕಡಿಮೆ ಖರ್ಚಿನ ವಿಧಾನಗಳಾದ ಬೆಂಡಿ ಬೀಜ ಊರುವುದು, ಚೆಂಡು ಹೂ ಬೆಳೆಯುವುದು, ಹಳದಿ ಕಾರ್ಡನ್ನು ಅಂಟಿನ ದ್ರಾವಣ ಹಚ್ಚಿ ತಾಕಿನಲ್ಲಿ ಕೋಲಿಗೆ ಕಟ್ಟಿ ನಿಲ್ಲಿಸುವ್ಯದರಿಂದ ಕ್ಭಿಟ ಬಾಧೆ ತಡೆಯಲು ಸಾಧ್ಯ ಎಂದು ವಿವರಿಸಿದರು.
ಮಣ್ಣು ವಿಜ್ಞಾನಿ ಡಾ. ರಾಜಕುಮಾರ ಜಿ. ಆರ್ ಮಾತನಾಡಿ, ಈ ಬೆಳೆಯಲ್ಲಿ ಕಂಡು ಬರುವ ಪೋಷಕಾಂಶಗಳನ್ನು ಪೂರೈಹಿಸಲು ಮೆಗ್ನಿಷಿಯಂ ಸಲ್ಫೇಟ್ (10 ಗ್ರಾಂ ಪ್ರತಿ ಲೀಟರ್ಗೆ), ಬೊರಾನ್ (2.5 ಗ್ರಾಂ ಪ್ರತಿ ಲೀಟರ್ಗೆ), ಪೊಟ್ಯಾಷಿಯಂ ನೈಟ್ರೇಟ್ (10 ಗ್ರಾಂ ಪ್ರತಿ ಲೀಟರ್ಗೆ) ಮತ್ತು ಚಿಲೇಟೆಡ್ ಜಿಂಕ್ (1 ಗ್ರಾಂ ಪ್ರತಿ ಲೀಟರ್ಗೆ) ಹಾಕಿ ಕರಗಿಸಿ ಸಿಂಪರಣೆ ಮಾಡಲು ತಿಳಿಸಿದರು. ಇದರಿಂದ ಬೆಳೆಯಲ್ಲಿ ಮುಂದೆ ಉಂಟಾಗಬಹುದಾದ ಎಲೆ ಕೆಂಪಾಗುವಿಕೆ, ಹೂ ಮತ್ತು ಇರುಪು ಉದುರುವಿಕೆ ಹಾಗೂ ಕಾಯಿ ಬಾಯಿ ಬಿಡುವುದು ಇತ್ಯಾದಿ ಹತೋಟಿ ಆಗುವುದು ಎಂದು ತಿಳಿಸಿದರು.
ಗ್ರಾಮದ ರೈತರುಗಳಾದ ಶಂಭುಲಿಂಗಪ್ಪ ಹುಲಿಹಳ್ಳಿ, ಮಾಲತೇಶ, ಮುಖೇಶ ಹಾಗೂ ಮತ್ತಿತ್ತರ ರೈತರು ಇದ್ದರು.