ಒಟಿಎಸ್ಗೆ ಒತ್ತಾಯಿಸಿ 26ನೇ ದಿನಕ್ಕೆ ಕಾಲಿಟ್ಟ ರೈತರ ಅಹೋರಾತ್ರಿ ಧರಣಿ
ಲೋಕದರ್ಶನ ವರದಿ
ರಾಣೀಬೆನ್ನೂರ 17: ಒಟಿಎಸ್ ಯೋಜನೆಗೆ ಒತ್ತಾಯಿಸಿ ಮಾಕನೂರಿನ ಯುನಿಯನ್ ಬ್ಯಾಂಕ್ ಆಫ್ ಇಂಡಿಯಾ, ಶಾಖಾ ಕಛೇರಿಯ ಮುಂದೆ ರೈತರು ಅಹೋರಾತ್ರಿ ಧರಣಿ ಸತ್ಯಾಗ್ರಹ ಇಂದಿಗೆ 27 ನೇ ದಿನಕ್ಕೆ ಕಾಲಿಡುತ್ತಿದ್ದು ಇದುವರೆಗೆ ಬ್ಯಾಂಕ್ ಹಿರಿಯ ಅಧಿಕಾರಿಗಳು ಮತ್ತು ಸರಕಾರ ಯಾವುದೇ ರೀತಿ ರೈತರಿಗೆ ಸ್ಪಂದಿಸದೆ ಇರುವ ಬಗ್ಗೆ ಮತ್ತು ಮುಖ್ಯಮಂತ್ರಿ ಮತ್ತು ಕೃಷಿ ಸಚಿವರ ತವರು ಜಿಲ್ಲೆಯಲ್ಲಿಯೇ ರೈತರ ಈ ರೀತಿಯ ಶೋಷಣೆ ಆಗುತ್ತಿದ್ದರೂ ರೈತರ ಬಗ್ಗೆ ಕಿಂಚತ್ತು ತಲೆ ಕೆಡಸಿಕೊಳ್ಳದ ಜಿಲ್ಲಾಧಿಕಾರಿ ಮತ್ತು ಸರಕಾರದ ನಿರ್ಲಕ್ಷತನದ ಬಗ್ಗೆ ರೈತ ಮುಖಂಡರಾದ ರವೀಂದ್ರಗೌಡ ಎಫ್. ಪಾಟೀಲ ಮತ್ತು ಜಿಲ್ಲಾಧ್ಯಕ್ಷ ಈರಣ್ಣ ಹಲಗೇರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯಲ್ಲಿ ಈಗಿನ ಜಿಲ್ಲಾಧಿಕಾರಿಯ ಬೇಜವಾಬ್ದಾರಿ ನೀತಿಯಿಂದ ಜಿಲ್ಲಾಡಳಿತ ನಿಷ್ಕೃಯಗೊಂಡಿದೆ, ಮುಖ್ಯಮಂತ್ರಿಯವರ ತವರು ಜಲ್ಲೆಯಲ್ಲಿ ರೈತರು ನ್ಯಾಯಕ್ಕಾಗಿ ಈ ರೀತಿ ಹೋರಾಟ ನಡಸಿದ್ದರೂ ಮೌನವಾಗಿರುವ ಇವರ ನಡೆ ರೈತ ವಿರೋಧಿ ನೀತಿಗೆ ಹಿಡಿದ ಕೈಗನ್ನಡಿಯಗಾಗಿದೆ.
ಜಿಲ್ಲಾಧಿಕಾರಿ ಮತ್ತು ಬ್ಯಾಂಕಿನ ಹಿರಿಯ ಅಧಿಕಾರಿಗಳ ಹಾಗೂ ಸರಕಾರದ ನಡೆಯನ್ನು ಖಂಡಿಸಿ ಶೀಘ್ರ ಒಟಿಎಸ್ ಜಾರಿಗೆ ಒತ್ತಾಯಿಸಿ ಇದೇ 20 ರಂದು ಬುಧವಾರ ದಿವಸ ಬೆಳಗ್ಗೆ 11 ಗಂಟೆಗೆ ಬ್ಯಾಂಕಿನ ಮುಂಭಾಗದಿಂದ ನೊಂದ ರೈತರ ಅರೆಬೆತ್ತಲೆ ಮೆರವಣಿಗೆ ಪ್ರಾರಂಭವಾಗಿ ಮಾಕನೂರು ಕ್ರಾಸ್ನ ರಾಷ್ಟ್ರೀಯ ಹೆದ್ದಾರಿಗೆ ತೆರಳಿ ಅಲ್ಲಿ ರಸ್ತೆ ತಡೆ ಮಾಡಿ ನಂತರ ಬ್ಯಾಂಕಿಗೆ ಮರಳಿ ಬ್ಯಾಂಕಿಗೆ ಬೀಗ ಜಡಿದು ನಮ್ಮ ಆಕ್ರೋಶವನ್ನು ವ್ಯಕ್ತಪಡಿಸಲಾಗುವುದೆಂದು ಪ್ರತಿಭಟನಾಕಾರರು ಎಚ್ಚರಿಸಿದರು. ಅಂದು ಆಗುವ ಎಲ್ಲಾ ಅಡೆತಡೆಗಳಿಗೆ, ಸಾರ್ವಜನಿಕರ ತೊಂದರೆ ಸಂಬಂಧಿಸಿದ ಸರಕಾರ, ಜಿಲ್ಲಾಡಳಿತ ಮತ್ತು ಬ್ಯಾಂಕಿನ ಹಿರಿಯ ಅಧಿಕಾರಿಗಳೇ ಹೊಣೆಗಾರರು ಎಂದು ತಿಳಿಸಿದ್ದಾರೆ.
ಇಂದಿನ ಪ್ರತಿಭಟನಾ ಸಂದರ್ಭದಲ್ಲಿ ರೈತ ಮುಖಂಡರಾದ ನ್ಯಾಯವಾದಿ ಎಸ್.ಡಿ. ಹಿರೇಮಠ, ಅಶೋಕಗೌಡ ಗಂಗನಗೌಡ್ರ, ಹನುಮಂತಪ್ಪ ಕುಂಬಳೂರು, ಸುರೇಶ ಮಲ್ಲಾಪುರ, ಹುಸೇನ್ಸಾಬ ದೊಡ್ಡಮನಿ, ಹರಿಹರಗೌಡ ಪಾಟೀಲ, ದಿಳ್ಳೆಪ್ಪ ಸತ್ಯಪ್ಪನವರ, ರಮೇಶ ಪೂಜಾರ, ವಿರುಪಾಕ್ಷಗೌಡ ಪಾಟೀಲ, ನಿಂಗರಡ್ಡಿ ಅಂತ್ರವಳ್ಳಿ, ಯಲ್ಲಪ್ಪ ಓಲೇಕಾರ, ರೈತ ಮಹಿಳೆಯರಾದ ಸೌಭಾಗ್ಯಮ್ಮ ಸವಣೂರು, ಶಾಂತಮ್ಮ ಹಿರೇಮರದ, ಪುಷ್ಪಾ ರಿತ್ತಿ, ಸಾಕಮ್ಮ ನಾಯಕ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.