ಮಳೆ ನೀರೀಕ್ಷೆಯಲ್ಲಿ ಅನ್ನದಾತರು: ಚದುರಿದ ಮಳೆಯಿಂದ ಕೃಷಿ ಕಾರ್ಯಕ್ಕೆ ಹಿನ್ನೆಡೆ
ಸಂತೋಷಕುಮಾರ್ ಕಾಮತ
ಮಾಂಜರಿ 20 : ಕಳೆದೊಂದು ವರ್ಷದಿಂದ ಕೃಷಿಕರು ಮಳೆ, ಬೆಳೆ ಇಲ್ಲದೇ ಬದುಕು ನಿರ್ವಹಿಸಲು ಹೋರಾಟ ಮಾಡಬೇಕಾದ ಸ್ಥಿತಿಯಲ್ಲಿದ್ದಾರೆ. ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ ಸೂರ್ಯನ ಪ್ರಖರತೆಗೆ ಬಳಲಿ ಬೆಂಡಾಗಿದ್ದು, ಇದೀಗ ಮುಂಗಾರು ಅವಧಿ ಎಂದು ಆಕಾಶದತ್ತ ಮುಖ ಮಾಡಿದ್ದಾರೆ.
ಈ ಬಾರಿ ವಾಡಿಕೆಗಿಂತ ಹೆಚ್ಚಿನ ಮಳೆ ಸುರಿಯುವ ಕುರಿತು ಹವಾಮಾನ ಇಲಾಖೆ ಮಾಹಿತಿ ನೀಡಿದ್ದು, ಶೀಘ್ರವೇ ಮಳೆ ಸುರಿಯಲಿ ನಾಡೆಲ್ಲ ಹಸಿರಾಗಲಿ ಎಂದು ಭಗವಂತನಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.
ಮುಂಗಾರು ಹಂಗಾಮು ಚಾಲನೆಗೊಳ್ಳುವ ಕಾಲ ಇದಾಗಿದ್ದು, ಮಳೆ ಸುರಿದರೆ ಜಮೀನುಗಳಲ್ಲಿ ಕೃಷಿ ಕಾರ್ಯಕ್ಕೆ ಬಿರುಸು ಸಿಗಲಿದೆ. ಜಮೀನುಗಳ ಸ್ವಚ್ಛತೆ, ಹೆಂಟೆಗಳನ್ನು ಸರಿಪಡಿಸುವ, ಜಮೀನಿನಲ್ಲಿ ಬೆಳೆದ ಕಸಕಡ್ಡಿಗಳನ್ನು ಸ್ವಚ್ಛಗೊಳಿಸುವ ಕಾರ್ಯ ಈಗಾಗಲೇ ಬಹುತೇಕ ಪೂರ್ಣಗೊಂಡಿದೆ. ಅಲ್ಲಲ್ಲಿ ಕೆಲ ಜಮೀನುಗಳನ್ನು ಬಿಟ್ಟರೇ ಬಹುತೇಕ ಎಲ್ಲಾ ಜಮೀನುಗಳು ಇದೀಗ ಮುಂಗಾರು ಮಳೆಗೆ ಬಾಯ್ದೆರೆದು ಕಾಯುತ್ತಿವೆ. ಆದರೆ, ನೀರೀಕ್ಷಿತಮಟ್ಟದಲ್ಲಿ ಧಾರಾಕಾರ ಮಳೆ ಸುರಿಯದೇ ರೈತರು ತಾಳ್ಮೆಯಿಂದ ಇನ್ನೂ ಸಮಯವಿದೆ ಎಂದು ವರುಣದೇವನ ಕೃಪೆಗೆ ಕಾದಿದ್ದಾರೆ
ಚದುರಿದ ಮಳೆ
ಜಿಲ್ಲೆಯಾದ್ಯಂತ ಕಳೆದೊಂದು ವಾರದಿಂದ ಅಲ್ಲಲ್ಲಿ ಉತ್ತಮಮಳೆ ಸುರಿಯುತ್ತಿದೆ. ಆದರೆ, ಇದು ವ್ಯಾಪಕವಾಗಿ ಸುರಿಯದೇ ಚದುರಿದಂತೆ ಮಳೆ ಸುರಿಯುತ್ತಿರುವುದರಿಂದ ಅಲ್ಲಲ್ಲಿ ಮಳೆ ಬೀಳದ ಪ್ರದೇಶಗಳ ರೈತರು ತೀವ್ರ ಆತಂಕಕ್ಕೆ ಈಡಾಗಿದ್ದಾರೆ. ಆದಾಗ್ಯೂ ಇನ್ನೂ ಸಮಯಾವಕಾಶವಿದೆ ಎಂಬ ಸಮಾಧಾನಕ್ಕೆ ತಾವೇ ತಾಳ್ಮೆಗೆ ಮುಂದಾಗಿದ್ದಾರೆ. ಜಿಲ್ಲಾ ಕೇಂದ್ರ ಬೆಳಗಾವಿ ಹುಕ್ಕೇರಿ ರಾಮದುರ್ಗ ಬೈಲಹೊಂಗಲ್ ತಾಲೂಕಿನ ಅಲ್ಲಲ್ಲಿ ಉತ್ತಮ ಮಳೆ ಸುರಿದರೆ, ಹಲವೆಡೆ ಸಾಮಾನ್ಯಮಳೆಯೂ ಕೂಡ ಸುರಿದಿಲ್ಲ.
ಅದೇ ರೀತಿ ಜಿಲ್ಲೆಯ ಹಲವು ತಾಲೂಕಿನ ಹಲವೆಡೆ ಉತ್ತಮ ಮಳೆ ಸುರಿದರೆ, ಕೆಲವೆಡೆ ಸಾಧಾರಣ ಮಳೆ ಸುರಿದಿದೆ. ಇದರಿಂದ ಇತ್ತ ಭೂಮಿ ಕೂಡ ತಣ್ಣಗಾಗದ ಸ್ಥಿತಿಯಿಂದಾಗಿ ಅರೆ ಝಳಕ್ಕೆ ಜನತೆ ಬೆಂಡಾಗಿದ್ದಾರೆ.
ಈಗಾಗಲೇ ಜಿಲ್ಲೆಯ ನಿಪ್ಪಾಣಿ ಕಾಗವಾಡ ರಾಯಬಾಗ್ ಚಿಕ್ಕೋಡಿ ಅಥಣಿ ತಾಲೂಕುಗಳಲ್ಲಿ ಅಂತರ್ಜಲಮಟ್ಟ ತೀವ್ರ ಕುಸಿದು ನೀರಿಗೆ ತತ್ವಾರ ಎದುರಾಗಿತ್ತು. ಬೆರಳೆಣಿಕೆಯಷ್ಟು ಗ್ರಾಮಗಳಿಗೆ ಖಾಸಗಿ ಕೊಳವೆಬಾವಿಗಳೇ ನೀರಿಗೆ ಆಧಾರವಾಗಿವೆ. ಆದಾಗ್ಯೂ ಅಲ್ಲಿ ಮಳೆ ಸುರಿದರೆ ಸುಧಾರಣೆಯಿಂದ ನೀರಿನ ಸಮಸ್ಯೆಗೆ ಪರಿಹಾರ ಸಿಕ್ಕೀತು ಎನ್ನಲಾಗುತ್ತಿದ್ದರೂ ಸಹ ಚದುರಿದ ಮಳೆಯಿಂದಾಗಿ ಆ ನೀರೀಕ್ಷೆ ಕೂಡ ಖಚಿತತೆ ಇಲ್ಲದೇ ಕಾಯುವಂತಾಗಿದೆ.
ನೀರೀಕ್ಷೆ ಮೂಡಿಸಿರುವ ವರುಣದೇವ: ಇನ್ನು ಜಿಲ್ಲೆಯಾದ್ಯಂತ ಕಳೆದ ವಾರದಿಂದ ಅಲ್ಲಲ್ಲಿ ಸಾಧಾರಣ ಮಳೆ ಸುರಿದಿತ್ತಾದರೂ, ಕಳೆದ 4-5 ದಿನಗಳಿಂದ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅಲ್ಲಲ್ಲಿ ಧಾರಾಕಾರ ಮಳೆ ಸುರಿದು ನೀರೀಕ್ಷೆ ಹುಟ್ಟುಹಾಕಿದೆ. ವ್ಯಾಪಕವಾಗಿ ಇಡೀತಾಲೂಕಿನಲ್ಲಿ ಮಳೆ ಸುರಿಯದ ಹಿನ್ನೆಲೆಯಲ್ಲಿ ರೈತರು ಅತಂತ್ರ ಸ್ಥಿತಿಗೆ ಸಿಲುಕುವಂತಾಗಿದೆ.ಒಟ್ಟಾರೆ ಮುಂಗಾರು ಹಂಗಾಮು ಆರಂಬಿಸಲು ಸಜ್ಜಾಗಿರುವ ರೈತರಿಗೆ ಮಳೆರಾಯನ ಸಾಥ್ ತುರ್ತು ಅಗತ್ಯವಿದ್ದು, ಮಳೆ ಸುರಿದಲ್ಲಿ ಕೃಷಿ ಕಾರ್ಯಗಳಿಗೆ ವೇಗ ಸಿಗಲಿದೆ.
ಮಳೆನೀರೀಕ್ಷೆಯಲ್ಲಿದ್ದೇವೆ. ಕಳೆದ ಎರಡು ವರ್ಷಗಳ ನಮ್ಮ ವನವಾಸಕ್ಕೆ ಈ ಬಾರಿಯಾದರೂ ಆ ಭಗವಂತ ಅಂತ್ಯ ಹಾಡಲಿ. ನಮ್ಮ ಗರಿಗೆದರಿದ ನೀರೀಕ್ಷೆಯಂತೆ ಸಕಾಲಕ್ಕೆ ಮಳೆ ಸುರಿದರ
ನಮ್ಮ ಕೃಷಿಯಂತೆ ನಮ್ಮ ಬದುಕೂ ಸಹ ಹಸನಾಗಲಿದೆ.
ಪುಂಡಲೀಕ ಧನವಾಡೆ
ಪ್ರಗತಿಪರ ರೈತರು ಇಂಗಳಿ ತಾ ಚಿಕೋಡಿ