ಜಾಲಿಕೊಪ್ಪ ಗ್ರಾಮದಲ್ಲಿ ರೈತರ ಬಣವೆಗಳಿಗೆ ಬೆಂಕಿ: ಅಪಾರ ಹಾನಿ
ಬೈಲಹೊಂಗಲ 23: ತಾಲೂಕಿನ ಜಾಲಿಕೊಪ್ಪ ಗ್ರಾಮದ ಬಸ್ ತಂಗುದಾನ ಬಳಿ 6ಕ್ಕೂ ಹೆಚ್ಚು ರೈತರ ಬಣವೆಗಳಿಗೆ ವಿದ್ಯುತ್ ಟ್ರಾನ್ಸ್ಫಾರ್ಮರದಿಂದ ಬೆಂಕಿ ಕಿಡಿ ಸಿಡಿದು ಆಕಸ್ಮಿಕವಾಗಿ ಬೆಂಕಿ ತಗುಲಿ ಅಪಾರ ಪ್ರಮಾಣದ ಹಾನಿಯಾಗಿರುವ ಘಟನೆ ನಡೆದಿದೆ.
ಗ್ರಾಮದ ಬಸ್ ತಂಗುದಾನ ಬಳಿ ರೈತರು ಬಣವೆಗಳನ್ನು ಇಡಲಾಗಿತ್ತು. ಮಂಗಳವಾರ ರಾತ್ರಿ ಎರಡು ಬಣವೆಗಳಿಗೆ ವಿದ್ಯುತ್ ಟ್ರಾನ್ಸ್ಫಾರ್ಮರ್ದಿಂದ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಸುದ್ದಿ ತಿಳಿದು ಅಗ್ನಿ ಶಾಮಕ ಠಾಣಾದ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದ್ದಾರೆ.
ಬುಧವಾರ ಮಧ್ಯಾಹ್ನ ಮತ್ತೇ ವಿದ್ಯುತ ಟ್ರಾನ್ಸ್ಫಾರ್ಮರ್ದಿಂದ ಬೆಂಕಿ ಕಿಡಿ ಸಿಡಿದು ಮತ್ತೇ 4ಕ್ಕೂ ಹೆಚ್ಚು ಬಣವೆಗಳಿಗೆ ಬೆಂಕಿ ಹೊತ್ತಿಕೊಂಡು ಸುಟ್ಟು ಕರಕಲಾಗಿದೆ. ಸುದ್ದಿ ತಿಳಿದು ಅಗ್ನಿಶಾಮಕ ಎರಡು ವಾಹನಗಳೊಂದಿಗೆ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದೃಷ್ಟಾವಶಾತ್ ಯಾವುದೇ ಪ್ರಾಣಹಾನಿ ಆಗಿಲ್ಲವೆಂದು ಅಗ್ನಿಶಾಮಕ ಠಾಣಾಧಿಕಾರಿ ತಿಪ್ಪಣ್ಣಾ ನಾವದಗಿ ತಿಳಿಸಿದ್ದಾರೆ.
ವಿದ್ಯುತ್ ಟ್ರಾನ್ಸ್ಫಾರ್ಮರದಿಂದ ಸಾಕಷ್ಟು ಬಾರಿ ಬೆಂಕಿ ಕಿಡಿ ಸಿಡಿಯುತ್ತಿರುವ ಕುರಿತು ಹೆಸ್ಕಾಂ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೂ ಕೂಡಾ ಯಾವುದೇ ಕ್ರಮ ಕೈಗೊಂಡಿಲ್ಲ. ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಸಂಕಷ್ಟದಲ್ಲಿರುವ ರೈತರ ಮೇಲೆ ಮತ್ತೊಂದು ಗಾಯದ ಬರೆ ಎಳೆದಂತಾಗಿದೆ ಎಂದು ಅಳಲು ತೋಡಿಕೊಂಡರು.