ಚಿಕ್ಕೋಡಿ

ರೈತರ ಆರ್ಥಿಕ ದ್ವಿಗುಣಗೊಳಿಸಲು ರೈತ ಉತ್ಪಾದಕ ಸಂಘ ಸಹಕಾರಿ:ಶಾಸಕ ಐಹೊಳೆ

ರೈತರ ಆರ್ಥಿಕ ದ್ವಿಗುಣಗೊಳಿಸಲು ರೈತ ಉತ್ಪಾದಕ ಸಂಘ ಸಹಕಾರಿ:ಶಾಸಕ ಐಹೊಳೆ

ಬೆಣ್ಣಿಹಳ್ಳಿ ಶ್ರೀ ಬಸವಣ್ಣ ರೈತ ಉತ್ಪಾದಕ ಕಂಪನಿ ಲಿ, ವಾರ್ಷಿಕ ಸಾಮಾನ್ಯ ಸಭೆ 

ಚಿಕ್ಕೋಡಿ 03: ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಸತತ ಪ್ರಯತ್ನ ಮಾಡುತ್ತಿದ್ದಾರೆ. ರೈತರು ವಿವಿಧ ಬೆಳೆಗಳನ್ನು ಬೆಳೆಯುವ ಮೂಲಕ ಆರ್ಥಿಕವಾಗಿ ಪ್ರಗತಿ ಸಾಧಿಸಬೇಕು ಎಂದು ಶಾಸಕ ದುರ್ಯೋಧನ ಐಹೊಳೆ ಹೇಳಿದರು. 

ತಾಲೂಕಿನ ಬೆಣ್ಣಿಹಳ್ಳಿ ಗ್ರಾಮದ ಶ್ರೀ ಬಸವಣ್ಣ ರೈತ ಉತ್ಪಾದಕ ಸಂಘದ ವಾರ್ಷಿಕ ಸಾಮಾನ್ಯಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ರೈತರ ಆದಾಯ ವೃದ್ಧಿಸಲು ಹತ್ತು ಹಲವು ಯೋಜನೆಗಳನ್ನು ಕೇಂದ್ರ ಸರ್ಕಾರ ಜಾರಿ ಮಾಡುತ್ತಿದೆ. ನಾನು ಸಹ ರೈತರ ಪ್ರಗತಿಗೆ ಸದಾ ಶ್ರಮೀಸುತ್ತಿದ್ದೇನೆ. ಈ ರೈತ ಉತ್ಪಾದಕ ಕಂಪನಿ ಹೆಚ್ಚು ಹೆಚ್ಚು ಪ್ರಗತಿ ಕಾಣಬೇಕು. ರೈತರು ವೈಜ್ಞಾನಿಕವಾಗಿ ಕೃಷಿ ಮಾಡಬೇಕು ಎಂದರು. 

ಚಿಕ್ಕೋಡಿಯ ಉಪ ಕೃಷಿ ನಿರ್ದೇಶಕ ಎಚ್‌.ಡಿ.ಕೋಳೆಕರ ಮಾತನಾಡಿ, ರೈತರು ಆರ್ಥಿಕವಾಗಿ ಸದೃಡವಾಗಲು ಮೊದಲು ಮಣ್ಣು ಪರೀಕ್ಷೆ ಮಾಡಿಸಬೇಕು. ಮಣ್ಣಿನಲ್ಲಿ ಯಾವ ಅಂಶ ಕೊರತೆ ಇದೆ ಎನ್ನುವುದನ್ನು ಮೊದಲು ಮನಗಂಡು ಕೃಷಿ ಮಾಡಿದರೆ ರೈತರಿಗೆ ಅನುಕೂಲವಾಗುತ್ತದೆ. ಅನಾವಶ್ಯಕವಾಗಿ ಹೆಚ್ಚು ರಾಸಾಯನಿಕ ಗೊಬ್ಬರ ಹಾಕಿ ಜಮೀನು ಹಾಳು ಮಾಡಲಿಕ್ಕೆ ರೈತರು ಮುಂದಾಗಬಾರದು. ಯಾವ ಬೆಳೆಗೆ ಎಷ್ಟು ಗೊಬ್ಬರ ಹಾಕಬೇಕು ಎಂಬುದನ್ನು ರೈತ ಸಂಪರ್ಕ ಕೇಂದ್ರದಲ್ಲಿ ಮಾಹಿತಿ ಪಡೆದುಕೊಂಡು ವೈಜ್ಞಾನಿಕವಾಗಿ ಕೃಷಿ ಮಾಡಿದರೆ ರೈತರಿಗೆ ಸಾಕಷ್ಟು ಅನುಕೂಲವಾಗುತ್ತದೆ ಎಂದರು. 

ರೈತ ಸಂಪರ್ಕ ಕೇಂದ್ರದಿಂದ ರೈತರ ಆದಾಯ ದ್ವಿಗುಣಗೊಳಿಸುವುದು ಕೇಂದ್ರ ಸರ್ಕಾರದ ಸಂಕಲ್ಪವಾಗಿದೆ. ರೈತರು ಬೆಳೆದ ಬೆಳೆಗಳನ್ನು ರೈತ ಉತ್ಪಾದಕರ ಕೇಂದ್ರದಲ್ಲಿ ಮಾರಾಟ ಮಾಡಿ ಈ ಕೇಂದ್ರದಲ್ಲಿಯೇ ಬೀಜ-ಗೊಬ್ಬರ ಖರೀದಿ ಮಾಡಿದರೆ ರೈತರಿಗೆ ಉಳಿತಾಯವಾಗಲಿದೆ ಎಂದರು. 

ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷರು ಹಾಗೂ ಸಂಘದ ಅಧ್ಯಕ್ಷ ದುಂಡಪ್ಪ ಬೆಂಡವಾಡೆ ಮಾತನಾಡಿ, ಬೆಣ್ಣಿಹಳ್ಳಿಯಲ್ಲಿ ಪ್ರಾರಂಭ ಮಾಡಿದ ರೈತ ಉತ್ಪಾದಕರ ಕಂಪನಿಯಿಂದ ಈ ಭಾಗದ ರೈತರಿಗೆ ಭಾರಿ ಅನುಕೂಲವಾಗಿದೆ. ಹಂತ ಹಂತವಾಗಿ ಈ ಸಂಘವನ್ನು ಅಭಿವೃದ್ಧಿಪಡಿಸಿ ರೈತರಿಗೆ ಹೆಚ್ಚು ಲಾಭ ನೀಡಲಾಗುತ್ತದೆ ಎಂದರು. 

ಈ ಸಂದರ್ಭದಲ್ಲಿ ಸಹಾಯಕ ಕೃಷಿ ನಿರ್ದೇಶಕ ಎಂ.ಎನ್‌.ಕಿತ್ತೂರ, ಕ್ರೀಯಾಜನ್ ಅಗ್ರಿ ಮತ್ತು ಬಯೋಟೆಕ್ ಜೋನಲ್ ಮ್ಯಾನೇಜರ ಮಂಜುನಾಥ ಕಕ್ಕಾಳಿ, ಸಂಸ್ಥೆಯ ಉಪಾಧ್ಯಕ್ಷ ಸಂತ್ರಾಮ ಕುಂಡ್ರುಕ, ನ್ಯಾಯವಾದಿ ಸಂತ್ರಾಮ ಕುಂಡ್ರುಕ್, ಹಸನ ಸನದಿ, ಶಿವಪ್ಪ ಪೊಗತ್ಯಾನಟ್ಟಿ ಮುಂತಾದವರು ಇದ್ದರು. 


ಸುದ್ದಿ ಓದಿ