ಸಾಲಬಾಧೆ ತಾಳಲಾರದೆ ರೈತ ರೇವಣೆಪ್ಪ ಕರಡೇರ ಆತ್ಮಹತ್ಯೆ
ಲೋಕದರ್ಶನ ವರದಿ
ರಾಣೇಬೆನ್ನೂರು 24: ತಾಲೂಕಿನ ಬಿಲ್ಲಹಳ್ಳಿ ಗ್ರಾಮದಲ್ಲಿ ಸಾಲಬಾಧೆಯಿಂದ ಬಳಲುತ್ತಿದ್ದ ರೈತ ರೇವಣೆಪ್ಪ ಭೀಮಪ್ಪ ಕರಡೇರ (60) ಎಂಬಾತನು ಶನಿವಾರ ಗ್ರಾಮದಲ್ಲಿ ಆತ್ಮಹತ್ಯೆಗೆ ಶರಣಾದ ದುರಂತ ಘಟನೆ ಸಂಭವಿಸಿದೆ. ಮೃತ ರೈತ ರೇವಣೆಪ್ಪ ಕಳೆದೆರೆಡು ವರ್ಷಗಳಿಂದ ತನಗಿರುವ 2 ಎಕರೆ ಭೂಮಿಯಲ್ಲಿ ಹತ್ತಿ ಬೆಳೆಯನ್ನು ಬೆಳೆದಿದ್ದು, ಬೆಳೆ ಕೈಗೆ ಬಂದಿದ್ದರೂ ಅದಕ್ಕೆ ಸೂಕ್ತ ಬೆಲೆ ಸಿಗದೆ ಮೈತುಂಬ ಸಾಲ ಮಾಡಿದ್ದನೆಂದು ಹೆಳಲಾಗಿದೆ. ಅಲ್ಲದೇ ಬ್ಯಾಂಕ್ ಸೇರಿದಂತೆ ವಿವಿಧ ಕಡೆ ಕೈಗಡವಾಗಿ 5 ಲಕ್ಷಕ್ಕೂ ಹೆಚ್ಚು ಸಾಲ ಮಾಡಿದ್ದು, ಸಾಲ ತಿರಿಸಲಾಗದೆ ಆತ್ಮಹತ್ಯೆ ಮಾಡಿಕೂಂಡಿದ್ದಾನೆ ಎನ್ನಲಾಗಿದೆ.
“ರೈತ ಸಂಘಟನೆಯಿಂದ ಪ್ರತಿಭಟನೆ” ಶನಿವಾರ ಬಿಲ್ಲಹಳ್ಳಿ ಗ್ರಾಮದಲ್ಲಿ ರೈತ ರೇವಣೆಪ್ಪ ಕರಡೇರ ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ರೈತ ಸಂಘಟನೆಯ ನೂರಾರು ಮುಖಂಡರು ರೈತರು ಸ್ಥಳೇಯ ಹಲಗೇರಿ ರಸ್ತ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಬಳಿ ಜಮಾಯಿಸಿದರು. ಅಲ್ಲೇ ಇದ್ದ ಕುಟುಂಬದವರಿಗೆ ಸಾಂತ್ವನ ನೀಡಿದ ಮುಖಂಡರು ಆಸ್ಪತ್ರೆ ಬಳಿ ಮೃತ ರೇವಣೆಪ್ಪನ ಶವ ವಿಟ್ಟು ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸಿದರು. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ತಹಸಿಲ್ದಾರ ಅವರಿಗೆ ತಮ್ಮ ಮನವಿ ಸಲ್ಲಿಸಿ ಕೂಡಲೇ ರೈತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಲು ಕ್ರಮ ಕೈಗೂಳ್ಳಬೇಕೆಂದು ಸಲ್ಲಿಸಿರುವ ಮನವಿಯಲ್ಲಿ ಒತ್ತಾಯಿಸಿದ್ದಾರೆ. ಪ್ರತಿಭಟನೆಯ ಮುಂಚೋಣಿಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ರವೀಂದ್ರಗೌಡ ಪಾಟೀಲ ಸೇರಿದಂತೆ ಮತ್ತಿತರ ಮುಖಂಡರು ಪಾಲ್ಗೊಂಡಿದ್ದರು.