ಹತ್ರಾಸ್ ಘಟನೆ: ದೇಶದ್ರೋಹ, ಕ್ರಿಮಿನಲ್ ಪಿತೂರಿ ಸೇರಿ 680 ಜನರ ವಿರುದ್ಧ ಎಫ್ ಐಆರ್
ಲಕ್ನೋ, ಅಕ್ಟೋಬರ್. 6: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಉತ್ತರ ಪ್ರದೇಶದ ಹತ್ರಾಸ್ ಸಾಮೂಹಿಕ ಅತ್ಯಾಚಾರ ಪ್ರಕರಣದ ಸಂತ್ರಸ್ತ ಕುಟುಂಬವನ್ನು ಭೇಟಿ ಮಾಡಿದ ಭೀಮ್ ಆರ್ಮಿಯ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಸೇರಿ ಪತ್ರಕರ್ತರು, ರಾಜಕಾರಣಿಗಳು, ಸಾಮಾಜಿಕ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಕೆಲವರ ವಿರುದ್ಧ ದೇಶದ್ರೋಹ, ಕ್ರಿಮಿನಲ್ ಸಂಚು ಪ್ರಕರಣ ದಾಖಲಾದರೆ ಇನ್ನು ಕೆಲವರ ವಿರುದ್ಧ 144 ಸೆಕ್ಷನ್ ಉಲ್ಲಂಘನೆ ಮತ್ತಿತರ ಆರೋಪಗಳಲ್ಲಿ ಅಲ್ಲಿನ ಸರ್ಕಾರ ಎಫ್ ಐಆರ್ ದಾಖಲಿಸಿದೆ.
ಹತ್ರಾಸ್ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಪತ್ರಕರ್ತ, ಓರ್ವ ರಾಜಕಾರಣಿ ಸೇರಿದಂತೆ ಹಲವು ಅಪರಿಚಿತರ ವಿರುದ್ಧ ಉತ್ತರ ಪ್ರದೇಶ ಪೊಲೀಸರು ದೇಶದ್ರೋಹ, ಕ್ರಿಮಿನಲ್ ಸಂಚು, ಗಲಭೆಗೆ ಪಿತೂರಿ ಸೇರಿದಂತೆ ವಿವಿಧ ಸೆಕ್ಷನ್ ಗಳಡಿ ಎಫ್ ಐಆರ್ ದಾಖಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಚಾಂದ್ ಪಾ ಪೊಲೀಸ್ ಠಾಣೆಯಲ್ಲಿ ಭಾನುವಾರ ಎಫ್ ಐಆರ್ ದಾಖಲಾಗಿದೆ. ಹತ್ರಾಸ್ ನಲ್ಲಿ ಮೂರು ಎಫ್ ಐಆರ್ ದಾಖಲಾಗಿದ್ದು, ಒಟ್ಟು 680 ಜನರನ್ನು ಅದರಲ್ಲಿ ಹೆಸರಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಕ್ಕೆ ವಿವಿಧ ಠಾಣೆಯಗಳಲ್ಲಿ ಪ್ರತ್ಯೇಕ ಎಫ್ ಐಆರ್ ದಾಖಲಾಗಿದೆ.
ಮೇಲ್ಜಾತಿಯ ಠಾಕೂರ್ ಸಮುದಾಯದ ನಾಲ್ವರಿಂದ ಸಾಮೂಹಿಕ ಅತ್ಯಾಚಾರಕ್ಕೊಳಗಾದ 19 ವರ್ಷದ ದಲಿತ ಯುವತಿ ಘಟನೆ ನಡೆದ 15 ದಿನಗಳ ನಂತರ ಸೆಪ್ಟೆಂಬರ್ 29ರಂದು ದೆಹಲಿಯಲ್ಲಿ ಸಾವನ್ನಪ್ಪಿದ್ದರು. ಸಂತ್ರಸ್ತೆಯ ಮನೆ ಮತ್ತು ಗ್ರಾಮಕ್ಕೆ ಹೆಚ್ಚಿನ ಜನರು ಬರಬಾರದು ಎಂಬ ಉದ್ದೇಶದಿಂದ ಗ್ರಾಮದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು.