ಮಾಜಿ ಕೇಂದ್ರ ಸಚಿವ ರಘುವಂಶ ಪ್ರಸಾದ್ ನಿಧನ
ನವದೆಹಲಿ,ಸೆಪ್ಟೆಂಬರ್ 13: ಮಾಜಿ ಕೇಂದ್ರ ಸಚಿವ ರಘುವಂಶ್ ಪ್ರಸಾದ್ ಸಿಂಗ್ ಭಾನುವಾರ ನಿಧನರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದರು.
ಆದರೆ ಅವರ ಅನಾರೋಗ್ಯ ಸ್ಥಿತಿ ವಿಷಮಿಸಿ ಭಾನುವಾರ ಬೆಳಗ್ಗೆ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಕೊರೊನಾ ದಿಂದ ಚೇತರಿಸಿಕೊಂಡ ನಂತರದ ಸಮಸ್ಯೆಗಳಿಗಾಗಿ ಕಳೆದೊಂದು ವಾರದ ಹಿಂದೆ ಏಮ್ಸ್ ಗೆ ದಾಖಲಾಗಿದ್ದರು. ಇತ್ತೀಚಿಗೆ ಲಾಲೂ ಪ್ರಸಾದ್ ನೇತೃತ್ವದ ಆರ್ ಜೆ ಡಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು.
ಕಾಂಗ್ರೆಸ್ ನೇತೃತ್ವದ ಕೇಂದ್ರದ ಯುಪಿಎ ಸರ್ಕಾರದಲ್ಲಿ ಕೇಂದ್ರ ಗ್ರಾಮೀಣ ಅಭಿವೃದ್ದಿ ಸಚಿವರಾಗಿ ರಘುವಂಶ್ ಪ್ರಸಾದ್ ಸೇವೆ ಸಲ್ಲಿಸಿದ್ದರು. ಅವರ ಅಧಿಕಾರಾವಧಿಯಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಆರಂಭಿಸಲಾಗಿತ್ತು. ಬಿಹಾರದ ವೈಶಾಲಿ ಕ್ಷೇತ್ರದಿಂದ ಅವರು ಹಲವು ಬಾರಿ ಲೋಕಸಭೆ ಪ್ರತಿನಿಧಿಸಿದ್ದರು. ಆ ಕ್ಷೇತ್ರದಿಂದ ದಾಖಲೆಯ ಐದುಬಾರಿ ಚುನಾಯಿತರಾಗಿದ್ದರು. ಆದರೆ, ಕಳೆದ ಎರಡು ಸಾರ್ವತ್ರಿಕ ಚುನಾವಣೆಗಳಲ್ಲಿ (2014,2019) ಪರಾಭವಗೊಂಡಿದ್ದರು.