ಬೈಲಹೊಂಗಲ

ಪ್ರತಿಯೊಬ್ಬರು ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಂಡು ಪುನೀತರಾಗಬೇಕು: ಶ್ರೀಗಳು

ಪ್ರತಿಯೊಬ್ಬರು ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಂಡು ಪುನೀತರಾಗಬೇಕು:  ಶ್ರೀಗಳು

ವಣ್ಣೂರು ಗ್ರಾಮದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಹೇಳಿಕೆ  

ಬೈಲಹೊಂಗಲ 02: ಸಕಲರೂ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವದರಿಂದ ಸುಖ, ನೆಮ್ಮದಿ ಲಭಿಸಿ ಜೀವನ ಸುಗಮವಾಗುವದು ಎಂದು ಬಾಳೇಹೊನ್ನೂರಿನ ರಂಭಾಪೂರಿ ಮಠದ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯರು ಹೇಳಿದರು. 

ಅವರು ಸಮೀಪದ ವಣ್ಣೂರು ಗ್ರಾಮದಲ್ಲಿ ಸೋಮವಾರ ನಡೆದ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ, ಶ್ರೀ ಜಗದ್ಗುರು ವಿಶ್ವರಾಧ್ಯ, ಶ್ರೀ ಪ್ರಭುದೇವರ ಮೂರ್ತಿ ಪ್ರತಿಷ್ಠಾಪಣೆ, ಅಡ್ಡಪಲ್ಲಕ್ಕಿ ಮಹೋತ್ಸವ, ಧರ್ಮಸಭೆ ಕಾರ್ಯಕ್ರಮಗಳು ಉದ್ಘಾಟಿಸಿ ಅವರು ಮಾತನಾಡಿ, ಇಂದಿನ ಯುವಕರು ಕೆಟ್ಟ ಚಟಗಳ ದಾಸರಾಗಿರುವದರಿಂದ ಸಮಾಜ ಸ್ವಾಸ್ಥ ಹದಗೆಡುತ್ತಿದೆ. ಯುವಕರು ಒಳ್ಳೆಯವರ ಆದರ್ಶಗಳನ್ನು ರೂಡಿಸಿಕೊಂಡು ತಮ್ಮ ಜೀವನವನ್ನು ರೂಪಿಸಿಕೊಂಡು ಮುನ್ನೆಡೆಯಬೇಕೆಂದರು. 

ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಇಂದು ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಮಾಜದಲ್ಲಿ ಒಳ್ಳೆಯ ಮಾರ್ಗವನ್ನು ಅನುಸರಿಸುತ್ತಿದ್ದಾರೆ. ಎಲ್ಲೆಡೆ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವ  ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಬೇಕೆಂದರು. 

ರಾಯಣ್ಣ ಸಂಗೊಳ್ಳಿಯ ಹಿರೇಮಠದ ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಜಾತ್ರಾ ಮಹೋತ್ಸವಗಳು ಜನರಲ್ಲಿ ಉತ್ತಮ ಭಾಂದವ್ಯ ಮೂಡಿಸಲಿದ್ದು ಎಲ್ಲ ಸಮುದಾಯಗಳು ಒಂದುಗೂಡಿ ದೇಶವನ್ನು ಅಭಿವೃದ್ದಿಯೆಡೆಗೆ ಕೊಂಡೊಯ್ಯಲು ಪ್ರಯತ್ನಿಸಬೇಕು. ಸರ್ವ ಧರ್ಮಗಳ ಆಶಯಗಳು ಒಂದೇ ಆಗಿದ್ದು, ಸಮಾಜದಲ್ಲಿ ಎಲ್ಲರೂ ಒಂದಾಗಿ ಉತ್ತಮ ಭಾವೈಕ್ಯೆತೆಯಿಂದ ಬಾಳಬೇಕೆಂದರು. 

ವಣ್ಣೂರು ಗ್ರಾಮದಲ್ಲಿ ಶ್ರೀ ವಿಶ್ವರಾಧ್ಯರ ಮತ್ತು ಶ್ರೀ ಪ್ರಭುದೇವರ ಮೂರ್ತಿಗಳ ಮೆರವಣಿಗೆ ನಡೆಯಿತು. ಮೂರ್ತಿಗಳ ಪ್ರತಿಷ್ಠಾಪಣೆ, ವೀರಭದ್ರೇಶ್ವರರ ಪಲ್ಲಕ್ಕಿ ಉತ್ಸವ, ಅಯ್ಯಾಚಾರ ದೀಕ್ಷಾ ಕಾರ್ಯಕ್ರಮ, ಬಾಳೇಹೊನ್ನೂರಿನ ರಂಭಾಪೂರಿ ಶ್ರೀಗಳ ಅಡ್ಡ ಪಲ್ಲಕ್ಕಿ ಉತ್ಸವ ಗ್ರಾಮದ ವಿವಿಧ ಬೀದಿಗಳಲ್ಲಿ ನಡೆಯಿತು.           

ಬೈಲಹೊಂಗಲ ತಾಲೂಕಿನ ಹಣಬರಹಟ್ಟಿಯ ಕೆಳದಿ ಹಿರೇಮಠದ ಬಸವಲಿಂಗ ಶಿವಾಚವಾರ್ಯ ಸ್ವಾಮೀಜಿ, ಸವದತ್ತಿಯ ಮೂಲಿಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ದೊಡವಾಡದ ಹಿರೇಮಠದ ಜಡಿಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಮಲ್ಲಾಪೂರದ ಗಾಳೇಶ್ವರ ಮಠದ ಚಿದಾನಂದ ಸ್ವಾಮೀಜಿ, ಸುತಗಟ್ಟಿಯ ಹಿರೇಮಠದ ಸಿದ್ದಲಿಂಗ ದೇವರು,  ಕಳಸದ ಹಿರೇಮಠದ ವೇ.ಮೂ.ವೀರಭದ್ರಶಾಸ್ತ್ರಿಗಳು, ರಾಣೇಬೆಣ್ಣೂರಿನ ಹಿರೇಮಠದ ವೇ.ಮೂ.ಪುನೀತ ಶಾಸ್ತ್ರಿಗಳು, ಸುತಗಟ್ಟಿಯ ಹಿರೇಮಠದ ವೇ.ಮೂ.ಚನ್ನಬಸಯ್ಯ ಶಾಸ್ತ್ರಿಗಳು, ಕಾಗತಿಯ ಶಿವಪೂಜಿ ಮಠದ ರಾಚಯ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.  

ನಿಪ್ಪಾಣಿಯ ಶ್ರೀ ಹಾಲಸಿದ್ದನಾಥ ಸಹಕಾರಿ ಸಕ್ಕರೆ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೆಶಕ  ಶಿವು ಕುಲಕರ್ಣಿ, ಚನ್ನಮ್ಮನ ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ, ಬಿಜೆಪಿ ಮುಖಂಡ ನಿಂಗನಗೌಡ ದೊಡಗೌಡರ, ಗುತ್ತಿಗೆದಾರ ಎಂ.ಬಿ.ಹಿರೇಮಠ, ಮಧ್ಯಪಾನ ಸಂಯಮ ಮಂಡಳಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ತುಬಾಕಿ, ಈರಣ್ಣ ಬಡಿಗೇರ, ತಾತಾಸಾಹೇಬ ದೇಸಾಯಿ, ಬಾಳಾಸಾಹೇಬ ದೇಸಾಯಿ, ನಿಂಗಪ್ಪ ಪೋತಲಿ, ಎಸ್‌.ಎಫ್‌.ನಾಯಕ, ಹಣಮಂತ ದೊಡ್ಡನ್ನವರ, ಯುವ ಧುರೀಣ ಮನೋಜ ಕೆಳಗೇರಿ, ಗುತ್ತಿಗೆದಾರ ಬಸವರಾಜ ಹೊಸಮನಿ, ಇನ್ನಿತರರು ಇದ್ದರು. 

ವೇ.ಮೂ.ಚಂದ್ರಯ್ಯ ಹಿರೇಮಠ ಸ್ವಾಗತಿಸಿದರು. ಡಾ.ಗುರುಪಾದಯ್ಯ ಸಾಲಿಮಠ ನಿರೂಪಿಸಿದರು. ಮನೋಜ ಕೆಳಗೇರಿ ವಂದಿಸಿದರು. ಬೆಂಗಳೂರಿನ ಪತ್ರಯ್ಯ ಶಾಸ್ತ್ರಿ ಹಾಗೂ ಗದಗ ಶ್ರೀ ವೀರೇಶ್ವರ ಪುಣ್ಯಾಶ್ರಮದ ಶಶಿಕುಮಾರ ಗುಲಭರ್ಗಾ ಕಲಾವಿದರಿಂದ ಸಂಗೀತ ಸೇವೆ ಜರುಗಿತು. 


ಸುದ್ದಿ ಓದಿ