ಧಾರವಾಡ - ಹುಬ್ಬಳ್ಳಿ

ಧರ್ಮ, ಜಾತಿಯ ಭೇದಗಳಿಲ್ಲದೇ ಎಲ್ಲರೂ ಸಮಾನರಾಗಿ, ಸಾಮರಸ್ಯದಿಂದ ಬಾಳಬೇಕು; ಮಹಾಪೌರ ಜ್ಯೋತಿ ಪಾಟೀಲ

ಧರ್ಮ, ಜಾತಿಯ ಭೇದಗಳಿಲ್ಲದೇ ಎಲ್ಲರೂ ಸಮಾನರಾಗಿ, ಸಾಮರಸ್ಯದಿಂದ ಬಾಳಬೇಕು; ಮಹಾಪೌರ ಜ್ಯೋತಿ ಪಾಟೀಲ

ಧಾರವಾಡ 10: ಸಮಾಜದಲ್ಲಿ ವಿವಿಧ ಸಮುದಾಯಗಳ ಜನರು ಇರುವದರಿಂದ ಯಾವುದೇ ರೀತಿಯ ಧರ್ಮ, ಜಾತಿ, ಮತ, ಪಂಥಗಳ ಭೇದವಿಲ್ಲದೇ ಎಲ್ಲರೂ ಸಮಾನರಾಗಿ, ಸಾಮರಸ್ಯದಿಂದ ಬಾಳಬೇಕೆಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮಹಾಪೌರರಾದ ಜ್ಯೋತಿ ವಿನಯ ಪಾಟೀಲ ಅವರು ಹೇಳಿದರು.  

ಅವರು ಇಂದು (ಜು.10) ಮಧ್ಯಾಹ್ನ ನಗರದ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ಶಿವಶರಣ ಶ್ರೀ ಹಡಪದ ಅಪ್ಪಣ್ಣ ಜಯಂತಿಯನ್ನು ಉದ್ಘಾಟಿಸಿ, ಮಾತನಾಡಿದರು. 

ಹಡಪದ ಸಮಾಜವು ಸಣ್ಣ ಸಮುದಾಯವಾಗಿದ್ದರೂ, ದೊಡ್ಡ ಸಂಘಟನೆಯಾಗಿ ಸಮಾಜದಲ್ಲಿ ಬೆಳೆದಿರುವುದು ಒಂದು ಸಂತಸದ ಸಂಗತಿಯಾಗಿದೆ. ಶರಣ ಪರಂಪರೆಯ ಅಗ್ರಗಣ್ಯ ಶರಣರಾದ ಹಡಪದ ಅಪ್ಪಣ್ಣನವರು ಕಾಯಕ ಯೋಗಿಯಾಗಿ ಅನೇಕ ಅನುಭವದ ವಚನಗಳನ್ನು ಬರೆದಿದ್ದಾರೆ. ಅವರ ವಚನಗಳ ಸಾರದ ಹಿನ್ನಲೆಯಲ್ಲಿ ಯಾವುದೇ ಸಮಾಜವಿರಲಿ, ಧರ್ಮವಿರಲಿ, ಜಾತಿ ಇರಲಿ ಎಲ್ಲರನ್ನೂ ಸಮಾನರಂತೆ ಕಾಣಬೇಕು. ಬಸವಣ್ಣನವರ ಕಾಲಮಾನದಲ್ಲಿ ಇದ್ದ ಶಿವಶರಣ ಶ್ರೀ ಹಡಪದ ಅಪ್ಪಣ್ಣ ಅವರು ಇತರರಿಗೆ ಮಾದರಿಯಾಗಿದ್ದರು ಎಂದು ಹೇಳಿದರು.  

ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಅವರು ಮಾತನಾಡಿ, 12ನೇ ಶತಮಾನ ಅಂದರೆ ನಮಗೆ ಎಲ್ಲ ವಚನಕಾರರು ನೆನಪಾಗುತ್ತಾರೆ. ಯಾವುದೇ ಜಾತಿ, ಧರ್ಮ, ಮತ, ಪಂಥ ಎನ್ನದೆ ಸರ್ವಧರ್ಮ ಸರ್ವಪಾಲು ಎಂದು ಶರಣರೆಲ್ಲಾ ಜೀವನ ನಡೆಸಿದವರು. ನಮ್ಮ ಮಹಾನ ದರ್ಶನಿಕರು, ಅವರು ಹೇಳುವ ವಚನಗಳು ನಮ್ಮ ಜೀವನಕ್ಕೆ ಧೇಯ್ಯ ವಾಕ್ಯಗಳಾಗಿವೆ ಎಂದು ಹೇಳಿದರು.   

 ಜನಸಾಮಾನ್ಯರ ಜೀವನ ಮಟ್ಟವನ್ನು ಉನ್ನತ ಮಾಡುವ ನಿಟ್ಟಿನಲ್ಲಿ ಸೇವಾ ಕಾರ್ಯಗಳನ್ನು ನಡೆಸಿದವರು. ಅವರು ಜನರಲ್ಲಿ ಶ್ರದ್ಧೆ, ನೀತಿ, ಮತ್ತು ಶುದ್ಧ ಜೀವನವನ್ನು ಪ್ರಚೋದಿಸಿದರು. ಕರ್ಮ ಮತ್ತು ಭಕ್ತಿಯ ಸಂಯೋಜನೆಯ ಮೂಲಕ ಸಮುದಾಯದಲ್ಲಿ ಶಾಂತಿ ಮತ್ತು ಸೌಹಾರ್ದತೆ ಹರಡಿಸಿದರು ಎಂದು ಅಪರ ಜಿಲ್ಲಾಧಿಕಾರಿಗಳು ಹೇಳಿದರು.   

ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ, ಧಾರವಾಡ ಮುರುಘಾಮಠದ ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳು ಮಾತನಾಡಿ, ಶರಣರಿಗೆ ಜಾತಿ, ಶ್ರೀಮಂತಿಕೆ, ಬಡತನ ಮುಖ್ಯ ಆಗುವುದಿಲ್ಲ, ಮನುಷ್ಯ ಜಾತಿ ಒಂದೇ ಎಂದು ಬದುಕುತ್ತಾರೆ. ಸಮಾಜದ ಸಮಾನತೆ ಹಾಗೂ ಸಹೋದರತ್ವದ ಬಾಳನ್ನು ಜೀವಿಸಿದ ಮಹಾನ್ ವ್ಯಕ್ತಿಗಳು ಶಿವಶರಣರಾಗಿದ್ದಾರೆ ಎಂದು ಅವರು ಹೇಳಿದರು.  

ಅಪ್ಪಣ್ಣವರ ಸಂದೇಶಗಳನ್ನು ಬಸವಣ್ಣವರು ಚಾಚು ತಪ್ಪದೇ ಪಾಲಿಸುತ್ತಿದ್ದರು. ನೂರಾರು ವರ್ಷಗಳ ಕಳೆದರೂ ಹಡಪದ ಅಪ್ಪಣ್ಣ ಅವರನ್ನು ಇಂದಿಗೂ ಸ್ಮರಿಸುವುದು ಅವರ ವ್ಯಕ್ತಿತ್ವ, ಆದರ್ಶ ಮತ್ತು ಸಮಾಜಕ್ಕೆ ಕೊಟ್ಟ ವಚನ ಸಾಹಿತ್ಯದಿಂದಾಗಿ ಎಂದು ಪೂಜ್ಯರು ತಿಳಿಸಿದರು. 

ಕಾರ್ಯಕ್ರಮದಲ್ಲಿ ಧಾರವಾಡ ಕೆ.ಇ. ಬೋರ್ಡ ಪ್ರೌಢ ಶಾಲೆ ಶಿಕ್ಷಕ ಸಂಗಮೇಶ ಹಡಪದ ಅವರು ಶಿವಶರಣ ಶ್ರೀ ಹಡಪದ ಅಪ್ಪಣ್ಣ ಅವರ ಜೀವನ ಹಾಗೂ ಸಾಮಾಜಕ್ಕೆ ಅವರು ನೀಡಿದ ಕೊಡುಗೆಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.  

ವೇದಿಕೆಯಲ್ಲಿ ಶ್ರೀ ಹಡಪದ ಅಪ್ಪಣ್ಣ ಸಮಾಜದ ಮುಖಂಡರಾದ ಈರಣ್ಣ ಚಿಕ್ಕಬೆಳ್ಳಿಕಟ್ಟಿ, ನಿಂಗರಾಜ ಹಡಪದ, ಮಾರುತಿ ಹಡಪದ, ಈರಣ್ಣ ಹಡಪದ, ಫಕ್ಕೀರ​‍್ಪ ಮೂಲಿಮನಿ, ಶಿವಕುಮಾರ ಅಣ್ಣಿಗೇರಿ, ನಾಗರಾಜ ಅಂಗಡಿ, ಮಲ್ಲಪ್ಪ ಹಡಪದ ಹಾಗೂ ಇತರರು ಇದ್ದರು.  

ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ: ಪ್ರಸಕ್ತ ಸಾಲಿನ ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 4ನೇ ರಾ​‍್ಯಂಕ್ ಗಳಿಸಿರುವ ಜಿಲ್ಲೆಯ ರಾಜೇಶ್ವರಿ ಮಂಜುನಾಥ ಹಡಪದ ವಿದ್ಯಾರ್ಥಿನಿಯನ್ನು ಹಾಗೂ ಎಸ್‌.ಎಸ್‌.ಎಲ್‌.ಸಿ ಮತ್ತು ಪಿ.ಯು.ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು.   

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಅವರು ಸ್ವಾಗತಿಸಿದರು. ರವಿ ಕುಲಕರ್ಣಿ ಅವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.  

ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರು, ವಿದ್ಯಾರ್ಥಿಗಳು, ಶಿಕ್ಷಕರು, ಸಾರ್ವಜನಿಕರು ಭಾಗವಹಿಸಿದ್ದರು. 


ಸುದ್ದಿ ಓದಿ