ದುಶ್ಚಟಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಿ: ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ
ಲೋಕದರ್ಶನ ವರದಿ
ಬೆಳಗಾವಿ 05: ಮಹಾತ್ಮ ಗಾಂಧೀಜಿಯವರ ಸರಳತೆ, ಸತ್ಯ, ಅಹಿಂಸೆ ಹಾಗೂ ಸ್ವಚ್ಛ ಸಮಾಜ ನಿರ್ಮಾಣದ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ದುಶ್ಚಟಗಳಿಂದ ದೂರವಿದ್ದು ಆರೋಗ್ಯಕರ ಹಾಗೂ ಉತ್ತಮ ಸಮಾಜ ನಿರ್ಮಾಣಕ್ಕೆ ಕೈಜೋಡಿಸುವುದೇ ಗಾಂಧೀಜಿಯವರಿಗೆ ಸಲ್ಲಿಸುವ ನಿಜವಾದ ಗೌರವವಾಗಿದೆ ಎಂದು ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.
ತಾಲೂಕಿನ ಹಲಗಾ ಗ್ರಾಮದ ಸುವರ್ಣ ಗಾರ್ಡನ್ ಸಭಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಆಯೋಜಿಸಿದ್ದ ಬೃಹತ್ ಜನಜಾಗೃತಿ ಜಾಥಾ, ಗಾಂಧಿ ಸ್ಮೃತಿ ಹಾಗೂ ಪಾನಮುಕ್ತರ ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿವಿಧ ದುಶ್ಚಟಗಳು ವ್ಯಕ್ತಿಯ ಆರೋಗ್ಯ, ಕುಟುಂಬದ ನೆಮ್ಮದಿ ಹಾಗೂ ಸಾಮಾಜಿಕ ಬದುಕಿನ ಮೇಲೆ ಗಂಭೀರ ದುಷ್ಪರಿಣಾಮ ಬೀರುತ್ತವೆ. ದುಶ್ಚಟವನ್ನು ತ್ಯಜಿಸಿ ಹೊಸ ಬದುಕಿನತ್ತ ಹೆಜ್ಜೆ ಇಟ್ಟಿರುವ ಪಾನಮುಕ್ತರ ನಿರ್ಧಾರ ಇತರರಿಗೂ ಮಾದರಿಯಾಗಿದೆ.
ಕುಟುಂಬದ ಸದಸ್ಯರು ಹಾಗೂ ಸಮಾಜದ ಸಹಕಾರದಿಂದ ದುಶ್ಚಟಮುಕ್ತ ಜೀವನವನ್ನು ಮತ್ತಷ್ಟು ಬಲಪಡಿಸಬೇಕು ಎಂದು ಸಲಹೆ ನೀಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ದಯಾಶೀಲ ಮಾತನಾಡಿ, ಗಾಂಧೀಜಿಯವರ ತತ್ವಾದರ್ಶಗಳನ್ನು ಸ್ಮರಿಸುವುದರ ಜೊತೆಗೆ ದುಶ್ಚಟಮುಕ್ತ ಸಮಾಜ ನಿರ್ಮಾಣದ ಸಂಕಲ್ಪವನ್ನು ಎಲ್ಲರೂ ಕೈಗೊಳ್ಳಬೇಕು. ಯುವಜನರು ದುಶ್ಚಟಗಳಿಂದ ದೂರವಿದ್ದು ಶಿಕ್ಷಣ, ಕ್ರೀಡೆ ಹಾಗೂ ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ಜಿ.ಆರ್. ಸೋನೆರ್ ಮಾತನಾಡಿ, ಪಾನಮುಕ್ತ ಬದುಕಿನಿಂದ ವ್ಯಕ್ತಿಯ ಆರೋಗ್ಯ, ಕುಟುಂಬದ ನೆಮ್ಮದಿ ಹಾಗೂ ಸಾಮಾಜಿಕ ಗೌರವ ಹೆಚ್ಚುತ್ತದೆ. ಮದ್ಯಪಾನದಿಂದ ದೂರವಿದ್ದು ಆರೋಗ್ಯಕರ ಜೀವನ ನಡೆಸುವ ಮೂಲಕ ಕುಟುಂಬದ ಸುಖ-ಶಾಂತಿಯನ್ನು ಕಾಪಾಡಿಕೊಳ್ಳಬಹುದು. ಕುಡಿತದ ಚಟದಿಂದ ಕುಟುಂಬದಲ್ಲಿ ಆರ್ಥಿಕ ಸಂಕಷ್ಟ, ಕಲಹ ಉಂಟಾಗಿ ಕುಟುಂಬವೇ ಬೀದಿಪಾಲಾಗುವ ಪರಿಸ್ಥಿತಿ ನಿರ್ಮಾಣವಾಗಬಹುದು. ಆದ್ದರಿಂದ ಪ್ರತಿಯೊಬ್ಬರೂ ಪಾನಮುಕ್ತ ಜೀವನ ನಡೆಸುವ ಸಂಕಲ್ಪ ಮಾಡಬೇಕು ಎಂದು ಪ್ರೇರಣೆ ನೀಡಿದರು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದ ಅಡವಿಸಿದ್ದೇಶ್ವರ ಮಠದ ಪೂಜ್ಯ ಅಡವೀಶ್ವರ ದೇವರು ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ಜನಜಾಗೃತಿ ವೇದಿಕೆಯ ನಿಕಟಪೂರ್ವ ಅಧ್ಯಕ್ಷ ಚಾರುಕೀರ್ತಿ ಸೈಬನ್ನವರ್, ಮಲ್ಲಿಕಾರ್ಜುನ ವಾಲಿ, ವಿಠ್ಠಲ ಪಿಸೆ, ಜಗದೀಶ ಹಾರುಗೊಪ್ಪ, ಬಸವರಾಜ ಸೊಪ್ಪಿಮಠ, ಜಿಲ್ಲಾ ನಿರ್ದೇಶಕ ಸತೀಶ್ ನಾಯ್ಕ್, ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರು, ಜಿಲ್ಲಾ ವ್ಯಾಪ್ತಿಯ ಯೋಜನಾಧಿಕಾರಿಗಳು, ಜಿಲ್ಲಾ ವಿಚಕ್ಷಣಾಧಿಕಾರಿ, ಜಿಲ್ಲಾ ಮೇಲ್ವಿಚಾರಕ ಶ್ರೇಣಿಯ ಸಿಬ್ಬಂದಿ, ಜಿಲ್ಲೆಯ ನವಜೀವನ ಸಮಿತಿ ಸದಸ್ಯರು, ಸ್ವಸಹಾಯ ಸಂಘಗಳ ಸದಸ್ಯರು ಸೇರಿದಂತೆ ಹಲವರು ಉಪಸ್ಥಿತರಿದ್ದರು.